ADVERTISEMENT

2022 ವಿಶ್ವಕಪ್‌ ಸೋಲು;ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೇಡಿನ ತವಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜೂನ್ 2024, 10:39 IST
Last Updated 26 ಜೂನ್ 2024, 10:39 IST
<div class="paragraphs"><p>ರೋಹಿತ್ ಶರ್ಮಾ ಹಾಗೂ ಜೋಸ್ ಬಟ್ಲರ್&nbsp;</p></div>

ರೋಹಿತ್ ಶರ್ಮಾ ಹಾಗೂ ಜೋಸ್ ಬಟ್ಲರ್ 

   

ಗಯಾನ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮಗದೊಮ್ಮೆ ಮಹತ್ವದ ಸೆಮಿಪೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಎರಡು ವರ್ಷಗಳ ಹಿಂದೆ ಅಡಿಲೇಡ್ ಮೈದಾನದಲ್ಲಿ ಎದುರಾದ ಸೋಲಿಗೆ ಭಾರತ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

2022ರಲ್ಲಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು...

ADVERTISEMENT

2022ರ ನವೆಂಬರ್ 10ರಂದು ಆಸ್ಟ್ರೇಲಿಯಾದ ಅಡಿಲೇಡ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲು ಕಂಡಿತ್ತು.

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಆರು ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ವಿರಾಟ್ ಕೊಹ್ಲಿ (50) ಹಾಗೂ ಹಾರ್ದಿಕ್ ಪಾಂಡ್ಯ ಆಕರ್ಷಕ ಅರ್ಧಶತಕ ಗಳಿಸಿದ್ದರು. ನಾಯಕ ರೋಹಿತ್ ಶರ್ಮಾ 27 ರನ್‌ಗಳ ಕೊಡುಗೆ ನೀಡಿದ್ದರು. ಪಾಂಡ್ಯ 33 ಎಸೆತಗಳಲ್ಲಿ 63 ರನ್ ಗಳಿಸಿದ್ದರು.

ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 16 ಓವರ್‌ಗಳಲ್ಲೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತ್ತು. ನಾಯಕ ಜೋಸ್ ಬಟ್ಲರ್ ಅಜೇಯ 80 ಹಾಗೂ ಅಲೆಕ್ಸ್ ಹೇಲ್ಸ್ ಅಜೇಯ 86 ರನ್ ಗಳಿಸಿ ಭಾರತದ ಕನಸನ್ನು ಭಗ್ನಗೊಳಿಸಿದ್ದರು.

ಬಳಿಕ ಫೈನಲ್‌ನಲ್ಲಿ ಪಾಕಿಸ್ತಾನ ಮಣಿಸಿದ್ದ ಇಂಗ್ಲೆಂಡ್ ಟ್ವೆಂಟಿ-20 ಕಿರೀಟ ಎತ್ತಿ ಹಿಡಿದಿತ್ತು.

ಭಾರತಕ್ಕೆ ಈಗ ಸೇಡಿನ ತವಕ...

ಎರಡು ವರ್ಷಗಳ ಹಿಂದೆ ಎದುರಾದ ಸೋಲಿಗೆ ಭಾರತ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ರೋಹಿತ್ ಶರ್ಮಾ ಮುಂದಾಳತ್ವದಲ್ಲೇ ಭಾರತ ಮತ್ತೆ ಕಣಕ್ಕಿಳಿದಿದೆ. ಅಂದು ತಂಡದಲ್ಲಿದ್ದ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಅರ್ಷದೀಪ್ ಸಿಂಗ್ ಹಾಗೂ ಯಜುವೇಂದ್ರ ಚಾಹಲ್ ಈಗಲೂ ತಂಡದಲ್ಲಿದ್ದಾರೆ ಎಂಬುದು ಗಮನಾರ್ಹವೆನಿಸುತ್ತದೆ.

2007ರ ಚೊಚ್ಚಲ ವಿಶ್ವಕಪ್ ಗೆಲುವಿನ ಬಳಿಕ ಭಾರತ ಎಂದಿಗೂ ಟಿ20 ವಿಶ್ವಕಪ್ ಗೆದ್ದಿಲ್ಲ. 2014ರಲ್ಲಿ ರನ್ನರ್-ಅಪ್ ಆಗಿತ್ತು. ಇನ್ನು 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಜಯಿಸಿತ್ತು. ಈಗ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಳ್ಳುವ ಇರಾದೆಯಲ್ಲಿದೆ.

ಮತ್ತೊಂದೆಡೆ ಜೋಸ್ ಬಟ್ಲರ್ ನಾಯಕತ್ವದಲ್ಲೇ ಇಂಗ್ಲೆಂಡ್ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ. ಗಯಾನದಲ್ಲಿ ಭಾರತೀಯ ಕಾಲಮಾನ ಗುರುವಾರ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.