ADVERTISEMENT

T20WC: 1st Semi Final- ನ್ಯೂಜಿಲೆಂಡ್ ಮಣಿಸಿ ಫೈನಲ್‌ಗೇರಿದ ಪಾಕಿಸ್ತಾನ

ಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಎದುರಾಗುವುದೇ ಭಾರತ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ನವೆಂಬರ್ 2022, 18:21 IST
Last Updated 9 ನವೆಂಬರ್ 2022, 18:21 IST
ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ –ಎಎಫ್‌ಪಿ ಚಿತ್ರ
ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ –ಎಎಫ್‌ಪಿ ಚಿತ್ರ   

ಸಿಡ್ನಿ: ‘ಈ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನದ ಎದುರು ಭಾರತ ಸ್ಪರ್ಧಿಸುವುದನ್ನು ನೋಡುವ ವಿಶ್ವಾಸವಿದೆ’–

ಬುಧವಾರ ನ್ಯೂಜಿಲೆಂಡ್ ಎದುರಿನ ಸೆಮಿಫೈನಲ್‌ನಲ್ಲಿ 7 ವಿಕೆಟ್‌ಗಳಿಂದ ಗೆದ್ದು ಫೈನಲ್ ಪ್ರವೇಶಿಸಿದ ಪಾಕಿಸ್ತಾನ ತಂಡದ ಕೋಚ್ ಮ್ಯಾಥ್ಯೂ ಹೇಡನ್ ಅವರ ಮನದಿಂಗಿತ ಇದು. ಪಂದ್ಯ ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಟೂರ್ನಿಯ ಸೂಪರ್ 12ರ ಹಂತದಲ್ಲಿ ಎರಡನೇ ಗುಂಪಿನಲ್ಲಿ ಭಾರತ ಮತ್ತು ಪಾಕ್ ತಂಡಗಳು ಆಡಿದ್ದವು. ಬದ್ಧ ಪ್ರತಿಸ್ಪರ್ಧಿಗಳಾದ ಉಭಯ ತಂಡಗಳು ಸೆಮಿಫೈನಲ್ ಪ್ರವೇಶಿಸಿದಾಗಿನಿಂದಲೂ ಹಲವು ದಿಗ್ಗಜರು ಇದೇ ಆಶಯ ವ್ಯಕ್ತಪಡಿಸಿದ್ದಾರೆ. ಇದರ ಮೊದಲ ಹಂತವಾಗಿ ಪಾಕ್ ತಂಡವು ಬಲಿಷ್ಠ ಕಿವೀಸ್ ಬಳಗದೆದುರು ಅಮೋಘ ಆಟವಾಡಿ ಜಯಿಸಿದೆ. ಗುರುವಾರ ಭಾರತವು ಇಂಗ್ಲೆಂಡ್ ವಿರುದ್ಧ ಜಯಿಸಿದರೆ ಭಾರತ ಮತ್ತು ಪಾಕ್ ತಂಡಗಳ ಅಭಿಮಾನಿಗಳ ಹುರುಪು ಇಮ್ಮಡಿಯಾಗುವುದು ಖಚಿತ.

ADVERTISEMENT

ಮೊದಲ ಸೆಮಿಫೈನಲ್‌ನಲ್ಲಿ ಜಯಿಸುವ ಮೆಚ್ಚಿನ ತಂಡ ಹಾಗೂ ಗುಂಪು ಹಂತದಲ್ಲಿ ಅಮೋಘ ಆಟವಾಡಿದ್ದ ಕೇನ್ ವಿಲಿಯಮ್ಸನ್ ಬಳಗವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಾಕ್ ವೇಗಿ ಶಾಹೀನ್ ಆಫ್ರಿದಿ (24ಕ್ಕೆ2) ಆರಂಭದಲ್ಲಿಯೇ ಕೊಟ್ಟ ಪೆಟ್ಟಿಗೆ ಕೇನ್ ಬಳಗ ತಡಬಡಾಯಿಸಿತು. ಆದರೆ ಕೊನೆಯ ಹಂತದ ಓವರ್‌ಗಳಲ್ಲಿ ಮಿಂಚಿದ ಡೆರಿಲ್ ಮಿಚೆಲ್ (ಔಟಾಗದೆ 53) ಅವರ ಬಲದಿಂದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 152 ರನ್‌ ಗಳಿಸಿತು.

ಇಡೀ ಟೂರ್ನಿಯಲ್ಲಿ ಫಾರ್ಮ್‌ಗಾಗಿ ಪರದಾಡಿದ್ದ ಪಾಕ್ ನಾಯಕ ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಇಲ್ಲಿ ಅಬ್ಬರಿಸಿದರು. ಮೊದಲ ವಿಕೆಟ್‌ ಜೊತೆಯಾಟದಲ್ಲಿ 105 ರನ್‌ ಸೇರಿಸಿದ ಅವರು ಪಾಕ್ ತಂಡದ ಗೆಲುವನ್ನು ಸರಳಗೊಳಿಸಿದರು. ಕಿವೀಸ್ ತಂಡದ ಅನುಭವಿ ಬೌಲರ್ ಟ್ರೆಂಟ್ ಬೌಲಟ್ಸ್ 13ನೇ ಓವರ್‌ನಲ್ಲಿ ಬಾಬರ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ಮೂರು ಓವರ್‌ಗಳ ನಂತರ ರಿಜ್ವಾನ್ ವಿಕೆಟ್‌ ಅನ್ನೂ ಕಬಳಿಸಿದರು. ಆದರೆ ಪಾಕ್ ಜಯವನ್ನು ತಡೆಯಲು ಸಾಧ್ಯವಾಗಲಿಲ್ಲ.

ಫೀಲ್ಡಿಂಗ್‌ನಲ್ಲಿ ಚುರುಕಾದ ತಂಡವೆಂದೇ ಖ್ಯಾತಯಾಗಿರುವ ಕಿವೀಸ್ ಬಳಗವು ಪಾಕ್ ಎದುರು ಎಡವಿತು. ಎರಡು ಸುಲಭ ಕ್ಯಾಚ್‌ಗಳನ್ನೂ ಫೀಲ್ಡರ್‌ಗಳು ಕೈಚೆಲ್ಲಿದರು. ಥ್ರೋ ಮತ್ತು ವಿಕೆಟ್‌ಕೀಪಿಂಗ್ ಕೂಡ ಚುರುಕಾಗಿರಲಿಲ್ಲ. ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಬಾಬರ್ ಕ್ಯಾಚ್ ಕೈಚೆಲ್ಲಿದ ಡೆವೋನ್ ಕಾನ್ವೆ ತಪ್ಪಿಗೆ ಕಿವೀಸ್ ತಂಡ ಪರಿತಪಿಸಿತು.

2009ರಲ್ಲಿ ಚಾಂಪಿಯನ್ ಆಗಿದ್ದ ಪಾಕ್ ತಂಡವು ನಂತರ ಫೈನಲ್ ಪ್ರವೇಶಿರಲಿಲ್ಲ. 2007ರಲ್ಲಿ ನಡೆದ ಚೊಚ್ಚಲ ಟೂರ್ನಿಯ ಫೈನಲ್‌ನಲ್ಲಿ ಭಾರತದ ಎದುರು ಪಾಕ್ ಸೋತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.