ADVERTISEMENT

T20 WC: ಐತಿಹಾಸಿಕ ಗೆಲುವು; ಪಾಕ್‌ಗೆ ಪೆಟ್ಟು ಕೊಟ್ಟ ಕ್ರಿಕೆಟ್ ಕೂಸು ಅಮೆರಿಕ

ನಾಗರಾಜ್ ಬಿ.
Published 7 ಜೂನ್ 2024, 2:39 IST
Last Updated 7 ಜೂನ್ 2024, 2:39 IST
<div class="paragraphs"><p>ಅಮೆರಿಕ ಆಟಗಾರರ ಸಂಭ್ರಮ</p></div>

ಅಮೆರಿಕ ಆಟಗಾರರ ಸಂಭ್ರಮ

   

(ಪಿಟಿಐ ಚಿತ್ರ)

ನ್ಯೂಯಾರ್ಕ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್‌ ಕೂಸು ಆತಿಥೇಯ ಅಮೆರಿಕ ಸೂಪರ್ ಓವರ್‌ನಲ್ಲಿ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದೆ. ಆ ಮೂಲಕ ಪಾಕಿಸ್ತಾನ ಭಾರಿ ಮುಖಭಂಗ ಅನುಭವಿಸಿದೆ.

ADVERTISEMENT

ಗ್ರ್ಯಾಂಡ್ ಪ್ರಯರಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಏಳು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. ನಾಯಕ ಬಾಬರ್ ಆಜಂ 44 ಹಾಗೂ ಶದಾಬ್ ಖಾನ್ 40 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ಅಮೆರಿಕ ನಾಯಕ ಮೊನಾಂಕ್ ಪಟೇಲ್ ಅರ್ಧಶತಕದ ಬಲದಿಂದ ಮೂರು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಆ್ಯಂಡ್ರಿಸ್ ಗೌಸ್ (35) ಹಾಗೂ ಆ್ಯರನ್ ಜೋನ್ಸ್ (36*) ಉಪಯುಕ್ತ ಕಾಣಿಕೆ ನೀಡಿದರು.

ಕೊನೆಯ ಓವರ್‌ನಲ್ಲಿ ಅಮೆರಿಕದ ಗೆಲುವಿಗೆ 15 ರನ್ ಬೇಕಿತ್ತು. ಆದರೆ 'ಟೈ' ಆಗಿದ್ದರಿಂದ ಪಂದ್ಯ ವಿಜೇತರನ್ನು ಸೂಪರ್ ಓವರ್‌ನಲ್ಲಿ ನಿರ್ಧರಿಸಲಾಯಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಮೆರಿಕ ಒಂದು ವಿಕೆಟ್‌ ನಷ್ಟಕ್ಕೆ 18 ರನ್ ಗಳಿಸಿತು. ಇದಕ್ಕುತ್ತರವಾಗಿ ಪಾಕಿಸ್ತಾನ 13 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಇತಿಹಾಸ ನಿರ್ಮಿಸಿದ ಅಮೆರಿಕ:

ಪಾಕಿಸ್ತಾನ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ಗೆಲುವು ದಾಖಲಿಸಿರುವ ಅಮೆರಿಕ ಇತಿಹಾಸ ನಿರ್ಮಿಸಿದೆ. ಅಲ್ಲದೆ ಐಸಿಸಿ ಖಾಯಂ ಸದಸ್ಯತ್ವ ಹೊಂದಿರುವ ತಂಡದ ವಿರುದ್ಧ ಗಳಿಸಿದ ನಾಲ್ಕನೇ ಗೆಲುವು ಇದಾಗಿದೆ. ಮತ್ತೊಂದೆಡೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸದಸ್ಯ ರಾಷ್ಟ್ರದೊಂದಿಗೆ ಪಾಕ್‌ಗೆ ಎದುರಾದ ಮೊದಲ ಸೋಲು ಇದಾಗಿದೆ. ವಿಶ್ವಕಪ್‌ಗೂ ಮುನ್ನ ಬಾಂಗ್ಲಾದೇಶ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಎರಡು ಸಲ ಗೆದ್ದಿದ್ದ ಅಮೆರಿಕ ಸರಣಿ ವಶಪಡಿಸಿಕೊಂಡಿತ್ತು. ಇನ್ನು 2021ರಲ್ಲಿ ಐರ್ಲೆಂಡ್ ವಿರುದ್ಧವೂ ಗೆಲುವು ಸಾಧಿಸಿತ್ತು.

ಅಮೆರಿಕ ಆಟಗಾರರ ಸಂಭ್ರಮ

'ಸೂಪರ್ 8' ಹಂತಕ್ಕೆ ಲಗ್ಗೆ ಇಡಬಹುದೇ ಅಮೆರಿಕ?

ಉದ್ಘಾಟನಾ ಪಂದ್ಯದಲ್ಲಿ ಕೆನಡಾ ವಿರುದ್ಧ ಗೆಲುವು ದಾಖಲಿಸಿದ್ದ ಅಮೆರಿಕ ಈಗ ಪಾಕಿಸ್ತಾನವನ್ನು ಬಗ್ಗುಬಡಿದಿದೆ. ಇದರೊಂದಿಗೆ ಮುಂದಿನ ಹಂತಕ್ಕೆ ಪ್ರವೇಶಿಸಲಿದೆಯೇ ಎಂಬ ನಿರೀಕ್ಷೆಯಿದೆ. 'ಎ' ಗುಂಪಿನಲ್ಲಿ ಅಮೆರಿಕ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಭಾರತ ಹಾಗೂ ಐರ್ಲೆಂಡ್ ವಿರುದ್ಧ ಸೆಣಸಲಿದೆ. 'ಎ' ಗುಂಪಿನ ಅಗ್ರ ಎರಡು ತಂಡಗಳು ಸೂಪರ್ ಎಂಟರ ಹಂತವನ್ನು ಪ್ರವೇಶಿಸಲಿವೆ.

ಟಿ20 ವಿಶ್ವಕಪ್‌ನಲ್ಲಿ 5 ಪಂದ್ಯ 'ಟೈ'

ಟ್ವೆಂಟಿ-20 ವಿಶ್ವಕಪ್ ಇತಿಹಾಸದಲ್ಲೇ ಈವರೆಗೆ ಐದು ಪಂದ್ಯಗಳು 'ಟೈ' ಆಗಿವೆ. 2007ರ ಟೊಚ್ಚಲ ಟಿ20 ವಿಶ್ವಕಪ್‌‌ನ 'ಟೈ' ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 'ಬಾಲ್ ಔಟ್'ನಲ್ಲಿ ಗೆಲುವು ಸಾಧಿಸಿತ್ತು. ಇನ್ನು ಪ್ರಸಕ್ತ ಸಾಗುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಎರಡನೇ ಸಲ ಪಂದ್ಯ 'ಟೈ' ಆಗಿದೆ. ಒಮಾನ್ ವಿರುದ್ಧ ನಮೀಬಿಯಾ 'ಟೈ' ಪಂದ್ಯದಲ್ಲಿ ಗೆಲುವು ಸಾಧಿಸಿತ್ತು.

  • ಭಾರತ vs ಪಾಕಿಸ್ತಾನ (2007, ಡರ್ಬನ್)

  • ಶ್ರೀಲಂಕಾ vs ನ್ಯೂಜಿಲೆಂಡ್ (2012, ಪಲ್ಲಿಕೆಲೆ)

  • ನ್ಯೂಜಿಲೆಂಡ್ vs ವೆಸ್ಟ್‌ಇಂಡೀಸ್ (2012, ಪಲ್ಲಿಕೆಲೆ)

  • ನಮೀಬಿಯಾ vs ಒಮಾನ್ (2024, ಬ್ರಿಡ್ಜ್‌ಟೌನ್)

  • ಅಮೆರಿಕ vs ಪಾಕಿಸ್ತಾನ (2024, ಡಲ್ಲಾಸ್)

ಒಂಬತ್ತು ಪಂದ್ಯಗಳಲ್ಲಿ 8ನೇ ಗೆಲುವು...

2024ನೇ ಸಾಲಿನಲ್ಲಿ ಈವರೆಗೆ ಒಂಬತ್ತು ಪಂದ್ಯಗಳ ಪೈಕಿ ಅಮೆರಿಕ ಎಂಟರಲ್ಲಿ ಗೆಲುವು ದಾಖಲಿಸಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಏಕಮಾತ್ರ ಸೋಲು ಕಂಡಿದೆ.

3 ವಿಕೆಟ್ ಪಡೆದು ಮಿಂಚಿದ ಮೂಡಿಗೆರೆಯ ನಾಸ್ತುಷ್ ಕೆಂಜಿಗೆ...

ಅಮೆರಿಕ ತಂಡದಲ್ಲಿರುವ ಚಿಕ್ಕಮಗಳೂರಿನ ಮೂಡಿಗೆರೆಯ ನಾಸ್ತುಷ್ ಕೆಂಜಿಗೆ ಮೂರು ವಿಕೆಟ್‌ ಪಡೆದು ಮಿಂಚಿದರು. ಅಮೆರಿಕ ತಂಡದ ನಾಯಕ ತಂಡದ ನಾಯಕ ಮೊನಾಂಕ್ ಪಟೇಲ್ ಮೂಲತಃ ಗುಜರಾತ್‌ನ ಆನಂದ್‌ ನಗರದವರು. ಐಪಿಎಲ್‌ನಲ್ಲಿ ಈ ಹಿಂದೆ ಆಡಿದ್ದ ಎಡಗೈ ಸ್ಪಿನ್ನರ್ ಹರಮೀತ್ ಸಿಂಘರ್ (ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್) ಹಾಗೂ ಮಿಲಿಂದ್ ಕುಮಾರ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಅವರೂ ಅಮೆರಿಕ ತಂಡದಲ್ಲಿದ್ದಾರೆ.

ಅಮೆರಿಕದ ನಾಯಕ ಮೊನಾಂಕ್ ಪಟೇಲ್

ವಿರಾಟ್ ದಾಖಲೆ ಮುರಿದ ಬಾಬರ್...

ಪಾಕಿಸ್ತಾನದ ನಾಯಕ ಬಾಬರ್ ಆಜಂ, ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ಇದೇ ಟೂರ್ನಿಯಲ್ಲಿ ಈ ಮೂವರ ಮಧ್ಯೆ ನಿಕಟ ಪೈಪೋಟಿ ಏರ್ಪಡುವ ನಿರೀಕ್ಷೆಯಿದೆ.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಸರದಾರರು:

  • ಬಾಬರ್ ಆಜಂ: 4,067

  • ವಿರಾಟ್ ಕೊಹ್ಲಿ: 4,038

  • ರೋಹಿತ್ ಶರ್ಮಾ: 4,026

ಅಮೆರಿಕ vs ಪಾಕಿಸ್ತಾನ ಮ್ಯಾಚ್ ಹೈಲೈಟ್ಸ್ ಇಲ್ಲಿ ನೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.