ದುಬೈ: ಏಕದಿನ ವಿಶ್ವಕಪ್ ಟೂರ್ನಿಯ ಮುಕ್ತಾಯದ ಬೆನ್ನಿಗೇ ಸೋಮವಾರ ಪ್ರಕಟಿಸಲಾದ ಐಸಿಸಿ ತಂಡದ ನಾಯಕರನ್ನಾಗಿ ಭಾರತದ ಬಿರುಸಿನ ಬ್ಯಾಟರ್ ರೋಹಿತ್ ಶರ್ಮಾ ಅವರನ್ನು ಹೆಸರಿಸಲಾಗಿದೆ. ರೋಹಿತ್ ಸೇರಿದಂತೆ ಭಾರತದ ಆರು ಮಂದಿ ಆಟಗಾರರು 11 ಮಂದಿಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಅಹಮದಾಬಾದಿನಲ್ಲಿ ಭಾನುವಾರ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತ 7 ವಿಕೆಟ್‌ಗಳಿಂದ ಆಸ್ಟ್ರೇಲಿಯಾಕ್ಕೆ ಮಣಿದಿತ್ತು. ನಿರ್ಭೀತಿಯಿಂದ ಬ್ಯಾಟ್ ಬೀಸಿದ್ದ ರೋಹಿತ್ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಹೊಡೆದ ಆಟಗಾರ ಎನಿಸಿದ್ದರು. ಅವರು 11 ಪಂದ್ಯಗಳಿಂದೆ 54.27ರ ಸರಾಸರಿಯಲ್ಲಿ 597 ರನ್ ಕಲೆಹಾಕಿದ್ದರು.
ವಿಶ್ವಕಪ್‌ನಲ್ಲಿ ಮೂರು ಶತಕ ಸೇರಿದಂತೆ 765 ರನ್ ಗಳಿಸಿ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ವಿರಾಟ್ ಕೊಹ್ಲಿ ಅವರೂ ಈ ತಂಡದಲ್ಲಿ ನಿರೀಕ್ಷೆಯಂತೆ ಸ್ಥಾನ ಪಡೆದಿದ್ದಾರೆ. ವಿಕೆಟ್ ಕೀಪರ್–ಬ್ಯಾಟರ್ ಕೆ.ಎಲ್.ರಾಹುಲ್, ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ ಮತ್ತು ರವೀಂದ್ರ ಜಡೇಜಾ ಅವರು ಉಳಿದ ನಾಲ್ವರು.
ರಾಹುಲ್ 75.33 ಸರಾಸರಿಯಲ್ಲಿ 452 ರನ್ ಗಳಿಸಿದ್ದರು. ಲೀಗ್‌ನ ಆರಂಭದಲ್ಲಿ ಮೊದಲ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿದ್ದರೂ, ಶಮಿ ಆಡಿದ ಏಳು ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು (12.20 ಸರಾಸರಿ) ಪಡೆದು ಮಿಂಚಿದ್ದರು.
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಕೇವಲ ನಾಲ್ಕು ಮಂದಿ ಆಟಗಾರರು ಮಾತ್ರ ವಿಶ್ವಕಪ್‌ನಲ್ಲಿ ಶಮಿ ಅವರಿಗಿಂತ (55 ವಿಕೆಟ್) ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರೆಂದರೆ– ಲಸಿತ್ ಮಾಲಿಂಗ (56), ಮಿಚೆಲ್ ಸ್ಟಾರ್ಕ್ (65), ಮುತ್ತಯ್ಯು ಮುರಳೀಧರನ್ (68) ಮತ್ತು ಗ್ಲೆನ್ ಮೆಕ್‌ಗ್ರಾತ್ (71). ಆದರೆ ಇವರಿಗೆ ಹೋಲಿಸಿದರೆ ಶಮಿ ಹತ್ತು ಕಡಿಮೆ ಪಂದ್ಯಗಳನ್ನು ಆಡಿದ್ದಾರೆ ಎಂದು ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಬೂಮ್ರಾ 11 ಪಂದ್ಯಗಳಿಂದ 20 ವಿಕೆಟ್‌ಗಳನ್ನು (ಪ್ರತಿ ಓವರಿಗೆ ಕೊಟ್ಟ ರನ್ 4.06) ಪಡೆದಿದ್ದರು.
ಟ್ರೋಫಿ ಗೆಲ್ಲಲಾಗದಿದ್ದರೂ ತಂಡದಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಭಾರತದ ಆಟಗಾರರು ಸ್ಥಾನ ಪಡೆದಿರುವುದು ಟೂರ್ನಿಯಲ್ಲಿ ಭಾರತ ಅತ್ಯುತ್ತಮ ತಂಡವಾಗಿತ್ತು ಎನ್ನುವುದಕ್ಕೆ ನಿದರ್ಶನವಾಗಿದೆ.
ನಾಲ್ಕನೇ ಕ್ರಮಾಂಕದಲ್ಲಿ ನ್ಯೂಜಿಲೆಂಡ್‌ನ ಮಧ್ಯಮ ಕ್ರಮಾಂಕದ ಆಟಗಾರ ಡೇರಿಲ್ ಮಿಚೆಲ್ ಆಯ್ಕೆಯಾಗಿದ್ದಾರೆ. ಅವರು ಲೀಗ್‌ನಲ್ಲೂ, ಸೆಮಿಫೈನಲ್‌ನಲ್ಲೂ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು.
ICC Team of the Tournament ಹೀಗಿದೆ
ರೋಹಿತ್ ಶರ್ಮಾ (ನಾಯಕ)
ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ)
ವಿರಾಟ್ ಕೊಹ್ಲಿ
ಡೇರಿಲ್ ಮಿಚೆಲ್ (ನ್ಯೂಜಿಲೆಂಡ್)
ಕೆ.ಎಲ್.ರಾಹುಲ್ (ವಿಕೆಟ್ ಕೀಪರ್)
ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ)
ರವೀಂದ್ರ ಜಡೇಜ
ಜಸ್‌ಪ್ರೀತ್ ಬೂಮ್ರಾ
ಮೊಹಮ್ಮದ್ ಶಮಿ
ಆ್ಯಡಂ ಜಂಪಾ (ಆಸ್ಟ್ರೇಲಿಯಾ)
ದಿಲ್ಶಾನ್ ಮಧುಶಂಕ (ಶ್ರೀಲಂಕಾ)
12ನೇ ಆಟಗಾರ: ಜೆರಾಲ್ಡ್ ಕೋಝಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.