ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್, ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಅಗ್ರಪಟ್ಟ ಅಲಂಕರಿಸಿದ್ದಾರೆ.
ಇಂಗ್ಲೆಂಡ್ ನಾಯಕ ಜೋ ರೂಟ್ ಅವರನ್ನು ಹಿಂದಿಕ್ಕಿರುವ ಲಾಬುಶೇನ್, 912 ರೇಟಿಂಗ್ ಅಂಕಗಳೊಂದಿಗೆ ಜೀವನಶ್ರೇಷ್ಠ ರ‍್ಯಾಂಕಿಂಗ್ ಸ್ಥಾನ ಗಳಿಸಿದ್ದಾರೆ.
ಈ ನಡುವೆ ಭಾರತದಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಏಳನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವುದು ಲಾಬುಶೇನ್ ಜೀವನಶ್ರೇಷ್ಠ ರ‍್ಯಾಂಕಿಂಗ್ ಸ್ಥಾನ ಗಳಿಸಲು ನೆರವಾಗಿದೆ.
ಆ್ಯಷಸ್ ಟೆಸ್ಟ್ಸರಣಿ ಮುನ್ನ ನಾಲ್ಕನೇ ಸ್ಥಾನದಲ್ಲಿದ್ದ ಲಾಬುಶೇನ್, ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ 74 ರನ್ ಗಳಿಸಿದ್ದರಲ್ಲದೆ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರು. ಬಳಿಕ ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಅರ್ಧಶತಕ (103 ಹಾಗೂ 51 ರನ್) ಸಾಧನೆ ಮಾಡುವುದರೊಂದಿಗೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
ಪಂದ್ಯಶ್ರೇಷ್ಠ ಲಾಬುಶೇನ್ ಬಲದೊಂದಿಗೆ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಆಸೀಸ್ 275 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಮುನ್ನಡೆ ಗಳಿಸಿದೆ.
ಏತನ್ಮಧ್ಯೆ ಟ್ವೆಂಟಿ-20ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಆಜಂ ಮಗದೊಮ್ಮೆ ಅಗ್ರಸ್ಥಾನ ಗಳಿಸಿದ್ದಾರೆ.
ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿ ಇಂತಿದೆ:
1. ಮಾರ್ನಸ್ ಲಾಬುಶೇನ್ (912)
2. ಜೋ ರೂಟ್ (897)
3. ಸ್ಟೀವ್ ಸ್ಮಿತ್ (884)
4. ಕೇನ್ ವಿಲಿಯಮ್ಸನ್ (879)
5. ರೋಹಿತ್ ಶರ್ಮಾ (797)
6. ಡೇವಿಡ್ ವಾರ್ನರ್ (775)
7. ವಿರಾಟ್ ಕೊಹ್ಲಿ (756)
8. ದಿಮುತ್ ಕರುಣರತ್ನೆ (754)
9. ಬಾಬರ್ ಆಜಂ (750)
10. ಟ್ರಾವಿಸ್ ಹೆಡ್ (728)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.