ದುಬೈ: ಭಾರತದ ಸ್ಮೃತಿ ಮಂದಾನ, ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಬ್ಯಾಟ್ಸ್‌ವುಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.
ಎಡಗೈ ಆಟಗಾರ್ತಿ ಮಂದಾನ, ಒಟ್ಟು 774 ಪಾಯಿಂಟ್ಸ್ ಕಲೆಹಾಕಿದ್ದಾರೆ. ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಐದನೇ ಸ್ಥಾನ ಉಳಿಸಿಕೊಂಡಿದ್ದಾರೆ. ಅವರ ಖಾತೆಯಲ್ಲಿ 709 ಪಾಯಿಂಟ್ಸ್ ಇವೆ.
ಆಸ್ಟ್ರೇಲಿಯಾದ ಎಲಿಸೆ ಪೆರಿ ಮತ್ತು ಮೆಗ್ ಲ್ಯಾನಿಂಗ್, ನ್ಯೂಜಿಲೆಂಡ್‌ನ ಆ್ಯಮಿ ಸಟ್ಟರ್‌ವೇಟ್ ಅವರು ಕ್ರಮವಾಗಿ ಎರಡರಿಂದ ನಾಲ್ಕನೇ ಸ್ಥಾನಗಳಲ್ಲಿದ್ದಾರೆ.
ಭಾರತದ ದೀಪ್ತಿ ಶರ್ಮಾ (626 ಪಾ.), 17ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಅವರು ಒಂದು ಸ್ಥಾನ ಮೇಲೇರಿದ್ದಾರೆ. ಹರ್ಮನ್‌ಪ್ರೀತ್ ಕೌರ್, 19ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರು 608 ಪಾಯಿಂಟ್ಸ್ ಗಳಿಸಿದ್ದಾರೆ.
ಪೂನಮ್ ರಾವುತ್ ಮತ್ತು ಕರ್ನಾಟಕದ ವೇದಾ ಕೃಷ್ಣಮೂರ್ತಿ ಕ್ರಮವಾಗಿ 29 ಮತ್ತು 33ನೇ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.
ಬೌಲರ್‌ಗಳ ಪಟ್ಟಿಯಲ್ಲಿ ಜೂಲನ್ ಗೋಸ್ವಾಮಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ಖಾತೆಯಲ್ಲಿ 685 ಪಾಯಿಂಟ್ಸ್ ಇವೆ.
ಪಾಕಿಸ್ತಾನದ ಸನಾ ಮಿರ್ ಈ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಅವರು 718 ಪಾಯಿಂಟ್ಸ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಮೇಗನ್ ಶುಟ್ ಎರಡನೇ ಸ್ಥಾನ ಕಾಪಾಡಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಜೆಸ್ ಜೊನಾಸನ್, ದಕ್ಷಿಣ ಆಫ್ರಿಕಾದ ಮರಿಜಾನ್ ಕಾಪ್ ಮತ್ತು ಶಿಬನಮ್ ಇಸ್ಮಾಯಿಲ್, ಇಂಗ್ಲೆಂಡ್‌ನ ಕ್ಯಾಥೆರಿನಾ ಬ್ರೂಂಟ್, ಭಾರತದ ದೀಪ್ತಿ ಶರ್ಮಾ ಹಾಗೂ ಪೂನಮ್ ಯಾದವ್, ಆಸ್ಟ್ರೇಲಿಯಾದ ಎಲಿಸೆ ಪೆರಿ ಮತ್ತು ಭಾರತದ ಏಕ್ತಾ ಬಿಷ್ಠ್ ಅವರು ಕ್ರಮವಾಗಿ ನಾಲ್ಕರಿಂದ ಹನ್ನೊಂದನೇ ಸ್ಥಾನಗಳಲ್ಲಿದ್ದಾರೆ.
ಕರ್ನಾಟಕದ ರಾಜೇಶ್ವರಿ ಗಾಯಕವಾಡ, 518 ಪಾಯಿಂಟ್ಸ್‌ಗಳೊಂದಿಗೆ 24ನೇ ಸ್ಥಾನ ಕಾಪಾಡಿಕೊಂಡಿದ್ದಾರೆ.
ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ ಮೂರನೇ ಸ್ಥಾನಕ್ಕೆ ಪ್ರಗತಿ ಕಂಡಿದ್ದಾರೆ. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ದೀಪ್ತಿ 397 ಪಾಯಿಂಟ್ಸ್ ಕಲೆಹಾಕಿದ್ದಾರೆ.
ಆಸ್ಟ್ರೇಲಿಯಾದ ಎಲಿಸೆ ಪೆರಿ ಅಗ್ರಪಟ್ಟ ಕಾಯ್ದುಕೊಂಡಿದ್ದಾರೆ. ಅವರು ಒಟ್ಟು 447 ಪಾಯಿಂಟ್ಸ್ ಹೊಂದಿದ್ದಾರೆ. ಜೂಲನ್ ಗೋಸ್ವಾಮಿ (212 ಪಾ.) 12ನೇ ಸ್ಥಾನದಲ್ಲಿದ್ದಾರೆ.
ತಂಡಗಳ ಪಟ್ಟಿಯಲ್ಲಿ ಭಾರತ, ಮೂರನೇ ಸ್ಥಾನದಲ್ಲಿದೆ. ಮಿಥಾಲಿ ಬಳಗ 120 ಪಾಯಿಂಟ್ಸ್ ಗಳಿಸಿದೆ.
ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದು, ಇಂಗ್ಲೆಂಡ್ ನಂತರದ ಸ್ಥಾನ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.