ADVERTISEMENT

ಮಹಿಳೆಯರ ಟ್ವೆಂಟಿ–20 ವಿಶ್ವಕಪ್: ಅದೃಷ್ಟ ನಮ್ಮ ಪರ: ವೇದಾ

ಪಿಟಿಐ
Published 6 ಮಾರ್ಚ್ 2020, 19:24 IST
Last Updated 6 ಮಾರ್ಚ್ 2020, 19:24 IST
ವೇದಾ ಕೃಷ್ಣಮೂರ್ತಿ
ವೇದಾ ಕೃಷ್ಣಮೂರ್ತಿ   

ಮೆಲ್ಬರ್ನ್: ‘ಅದೃಷ್ಟದಲ್ಲಿ ನನಗೆ ಅಪಾರ ನಂಬಿಕೆ ಇದೆ. ಈ ಬಾರಿ ವಿಶ್ವಕಪ್ ಜಯಿಸಲು ನಮಗೆ ಅದೃಷ್ಟದ ಬಲವಿದೆ’ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿರುವ ಕನ್ನಡತಿ ವೇದಾ ಕೃಷ್ಣಮೂರ್ತಿ ಹೇಳಿದ್ದಾರೆ.

ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಸಲ ಫೈನಲ್ ತಲುಪಿರುವ ಭಾರತ ತಂಡವು ಭಾನುವಾರ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಕುರಿತು ಶುಕ್ರವಾರ ವೇದಾ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸೆಮಿಫೈನಲ್‌ ಪಂದ್ಯವು ಮಳೆಯಿಂದ ನಡೆಯದ ಕಾರಣ ನಾವು ಫೈನಲ್‌ ತಲುಪಿದ್ದೇವೆ ಎಂದಲ್ಲ. ಹವಾಮಾನವನ್ನು ನಿಯಂತ್ರಿಸುವುದು ಯಾರ ಕೈಯಲ್ಲೂ ಇಲ್ಲ. ನಾವು ಗುಂಪು ಹಂತದಲ್ಲಿ ಎಲ್ಲ ಪಂದ್ಯಗಳನ್ನು ಜಯಿಸಿದ್ದರ ಫಲವಾಗಿ ಪ್ರಶಸ್ತಿ ಸುತ್ತಿನಲ್ಲಿ ಆಡುವ ಅರ್ಹತೆ ಗಳಿಸಿದ್ದೇವೆ’ ಎಂದರು.

ADVERTISEMENT

‘ಎ’ ಗುಂಪಿನಲ್ಲಿ ನಾಲ್ಕು ಪಂದ್ಯಗಳಲ್ಲಿ ಭಾರತ ತಂಡವು ಜಯಿಸಿತ್ತು. ಮೊದಲ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸಿತ್ತು. ಇದು ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಸಿದೆ. ಫೈನಲ್‌ನಲ್ಲಿಯೂ ಮತ್ತೊಮ್ಮೆ ಆಸ್ಟ್ರೇಲಿಯಾವನ್ನು ಹಣಿಯುವ ಹುಮ್ಮಸ್ಸಿನಲ್ಲಿದೆ.

‘ಈ ಟೂರ್ನಿಯಲ್ಲಿ ಅಭಿಯಾನ ಆರಂಭಿಸುವಾಗ ಫೈನಲ್ ತಲುಪುವುದು ನಮ್ಮ ಮೊದಲ ಗುರಿಯಾಗಿತ್ತು. ಅದನ್ನು ಈಗ ನಾವು ಸಾಧಿಸಿದ್ದೇವೆ. ಆ ದಿನ ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಆಡುವುದೊಂದೇ ಈಗ ಬಾಕಿ ಇದೆ. ಫೈನಲ್‌ಗೆ ತಕ್ಕಂತಹ ಆಟವನ್ನು ಆಡಬೇಕು’ ಎಂದು 27 ವರ್ಷದ ವೇದಾ ಹೇಳಿದರು.

2017ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದ ಭಾರತ ತಂಡದಲ್ಲಿ ವೇದಾ ಆಡಿದ್ದರು.

ಮೇಗನ್‌ಗೆ ಭಯ: ‘ಭಾರತದ ಎದುರು ಆಡುವುದನ್ನು ನಾನು ದ್ವೇಷಿಸುತ್ತೇನೆ. ಆ ತಂಡದವರು ನನ್ನನ್ನೇ ಗುರಿಯಾಗಿಟ್ಟು ಪ್ರಹಾರ ಮಾಡುತ್ತಾರೆ. ಅದರಲ್ಲೂ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಅವರ ಬ್ಯಾಟಿಂಗ್‌ ಅಬ್ಬರ ನನ್ನಲ್ಲಿ ಭೀತಿ ಮೂಡಿಸುತ್ತದೆ. ತ್ರಿಕೋನ ಸರಣಿಯಲ್ಲಿ ಶಫಾಲಿ ನನ್ನ ಎಸೆತದಲ್ಲಿ ಎತ್ತಿದ್ದ ಸಿಕ್ಸರ್ ಇಂದಿಗೂ ಮರೆತಿಲ್ಲ. ನನ್ನ ಜೀವನದಲ್ಲಿಯೇ ಹೊಡೆಸಿಕೊಂಡ ಅತಿದೊಡ್ಡ ಸಿಕ್ಸರ್ ಅದಾಗಿದೆ’ ಎಂದು ಆಸ್ಟ್ರೇಲಿಯಾದ ಮಧ್ಯಮವೇಗದ ಬೌಲರ್ ಮೇಗನ್ ಶುಟ್ ಹೇಳಿದ್ದಾರೆ. ಐಸಿಸಿ ವೆಬ್‌ಸೈಟ್‌ಗೆ ಅವರು ಹೇಳಿಕೆ ನೀಡಿದ್ದಾರೆ.

ಕಿಮ್ ಕಾಟನ್, ಎಹಸಾನ್ ಅಂಪೈರಿಂಗ್
ಮಹಿಳೆಯರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಕಿಮ್ ಕಾಟನ್ ಮತ್ತು ಪಾಕಿಸ್ತಾನದ ಎಹಸಾನ್ ರಝಾ ಅಂಪೈರ್‌ಗಳಾಗಿ ಕಾರ್ಯ ನಿರ್ವಹಿಸುವರು.

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ನಡೆದಿದ್ದ ಸೆಮಿಫೈನಲ್‌ನಲ್ಲಿ 42 ವರ್ಷದ ಕಿಮ್ ಕಾಟನ್ ಕಾರ್ಯನಿರ್ವಹಿಸಿದ್ದರು. ಮಳೆಯಿಂದ ರದ್ದಾದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಎಹಸಾನ್ ಕಾರ್ಯನಿರ್ವಹಿಸಬೇಕಿತ್ತು.

ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಗ್ರೆಗರಿ ಬ್ರಾಥ್‌ವೈಟ್ ಟಿವಿ ಅಂಪೈರ್ ಆಗಿದ್ದಾರೆ. ಜಿಂಬಾಬ್ವೆಯ ಲ್ಯಾಂಗ್ಟನ್ ರಸೇರ್ ನಾಲ್ಕನೇ ಅಂಪೈರ್ ಆಗಿದ್ದು, ಇಂಗ್ಲೆಂಡ್‌ನ ಕ್ರಿಸ್ ಬ್ರಾಡ್ ರೆಫರಿಯಾಗಿದ್ದಾರೆ.

ಪತ್ನಿಯ ಆಟ ನೋಡಲು ತೆರಳಿದ ಸ್ಟಾರ್ಕ್!
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಅವರು ದಕ್ಷಿಣ ಆಫ್ರಿಕಾದ ಎದುರಿನ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ತಮ್ಮ ಪತ್ನಿಗಾಗಿ ಆಡುತ್ತಿಲ್ಲ!

ಭಾನುವಾರ ಮೆಲ್ಬರ್ನ್‌ನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ, ಭಾರತದ ಎದುರು ಕಣಕ್ಕಿಳಿಯಲಿರುವ ಆಸ್ಟ್ರೇಲಿಯಾ ತಂಡದಲ್ಲಿರುವ ತಮ್ಮ ಪತ್ನಿ ಅಲೈಸಾ ಹೀಲಿ ಅವರ ಆಟ ನೋಡಲು ಸ್ಟಾರ್ಕ್ ಸ್ವದೇಶಕ್ಕೆ ಮರಳಿದ್ದಾರೆ.

‘ಮಿಚ್‌ಗೆ (ಸ್ಟಾರ್ಕ್‌) ಜೀವಮಾನದಲ್ಲಿ ಒಂದು ಸಲ ಲಭಿಸಿರುವ ಅವಕಾಶವಾಗಿದೆ. ಪತ್ನಿ ಮತ್ತು ಅವರು ಆಡುವ ತಂಡವನ್ನು ಬೆಂಬಲಿಸಲು ಸ್ಟಾರ್ಕ್‌ಗೆ ಅನುಮತಿ ನೀಡಲಾಗಿದೆ. ಇದು ಸಂತಸದ ವಿಷಯ’ ಎಂದು ಆಸ್ಟ್ರೇಲಿಯಾ ಪುರುಷರ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.