ಕೇಪ್‌ಟೌನ್: ಶಬ್ನಿಮ್ ಇಸ್ಮಾಯಿಲ್ ಹಾಗೂ ಅಯಾಬೊಂಗಾ ಕಾಕಾ ಅವರ ಅಮೋಘ ಬೌಲಿಂಗ್‌ನಿಂದಾಗಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿತು.
ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಆತಿಥೇಯ ಬಳಗವು 6 ವಿಕೆಟ್‌ಗಳಿಂದ ಇಂಗ್ಲೆಂಡ್ ಎದುರು ಜಯಿಸಿತು. ಶಬ್ನಿಮ್ ಮೂರು ಹಾಗೂ ಅಯಾಬೊಂಗಾ ನಾಲ್ಕು ವಿಕೆಟ್ ಗಳಿಸಿದರು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿ ವೋಲ್ವ್‌ವಾರ್ಡ್ (53; 44ಎ) ಹಾಗೂ ತಜ್ಮಿನ್ ಬ್ರಿಟ್ಸ್ (68; 55ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 96 ರನ್ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 164 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಡೇನಿಲ್ ವೈಟ್ (34) ಹಾಗೂ ಸೋಫಿ ಡಂಕ್ಲಿ (28) ಅವರು ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ನೆಥಾಲಿ ಸ್ಕೀವರ್ ಬ್ರಂಟ್ (40) ಮತ್ತು ಹೀಥರ್ ನೈಟ್ (31 ರನ್) ಅವರು ಕೂಡ ಮಹತ್ವದ ಕಾಣಿಕೆ ಕೊಟ್ಟರು. ಆದರೆ, ಶಿಸ್ತಿನ ಬೌಲಿಂಗ್ ಮಾಡಿದ ಆತಿಥೇಯ ಬೌಲರ್‌ಗಳು ಸೂಕ್ತ ಸಮಯಕ್ಕೆ ಜೊತೆಯಾಟಗಳನ್ನು ಮುರಿದರು. ಇದರಿಂದಾಗಿ ಇಂಗ್ಲೆಂಡ್ ಆಟಗಾರ್ತಿಯರು ನಿರಾಶೆ ಅನುಭವಿಸಿದರು.
ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಗುರುವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವು ಭಾರತ ತಂಡದ ಎದುರು ಜಯಿಸಿತ್ತು.
ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 4ಕ್ಕೆ 164 (ಲಾರಾ ವಾಲ್ವ್‌ವಾರ್ಡ್ 53, ತಜ್ಮಿನ್ ಬ್ರಿಟ್ಸ್ 68, ಮೆರಿಜಾನಿ ಕ್ಯಾಪ್ ಔಟಾಗದೆ 27, ಸೋಫಿ ಎಕ್ಸೆಲ್‌ಸ್ಟೋನ್ 22ಕ್ಕೆ3) ಇಂಗ್ಲೆಂಡ್: 20 ಓವರ್‌ಗಳಲ್ಲಿ 8ಕ್ಕೆ158 (ಡೇನಿಲ್ ವೈಟ್ 34, ಸೋಫಿ ಡಂಕ್ಲಿ 28, ನಥಾಲಿ ಸ್ಕೀವರ್ ಬ್ರಂಟ್ 40, ಹೀಥರ್ ನೈಟ್ 31, ಶಬ್ನಿಮ್ ಇಸ್ಮಾಯಿಲ್ 27ಕ್ಕೆ3, ಅಯಬೊಂಗಾ ಕಾಕಾ 29ಕ್ಕೆ4) ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 6 ರನ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.