ADVERTISEMENT

ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್: ಪೂನಂ ಸ್ಪಿನ್; ಆಸ್ಟ್ರೇಲಿಯಾ ಸ್ಟನ್!

ದೀಪ್ತಿ ಬ್ಯಾಟಿಂಗ್ ಬೆಡಗು; ಮಿಂಚಿದ ಶಿಖಾ ಪಾಂಡೆ

ಏಜೆನ್ಸೀಸ್
Published 21 ಫೆಬ್ರುವರಿ 2020, 19:47 IST
Last Updated 21 ಫೆಬ್ರುವರಿ 2020, 19:47 IST
ವಿಕೆಟ್‌ ಗಳಿಸಿದ ಪೂನಂ ಯಾದವ್ ಅವರನ್ನು ಅಭಿನಂದಿಸಿದ ಸಹ ಆಟಗಾರ್ತಿಯರು –ಎಎಫ್‌ಪಿ ಚಿತ್ರ
ವಿಕೆಟ್‌ ಗಳಿಸಿದ ಪೂನಂ ಯಾದವ್ ಅವರನ್ನು ಅಭಿನಂದಿಸಿದ ಸಹ ಆಟಗಾರ್ತಿಯರು –ಎಎಫ್‌ಪಿ ಚಿತ್ರ   
""

ಸಿಡ್ನಿ: ಮಣಿಕಟ್ಟಿನ ಸ್ಪಿನ್ನರ್ ಪೂನಂ ಯಾದವ್ ಅವರ ಸ್ಪಿನ್ ಸುಳಿಯಲ್ಲಿ ‘ಹಾಲಿ ಚಾಂಪಿಯನ್’ ಆಸ್ಟ್ರೇಲಿಯಾ ಮಹಿಳಾ ತಂಡವು ಮುಳುಗಿತು. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಬಳಗವು ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಶುಕ್ರವಾರ ಇಲ್ಲಿ ನಡೆದ ’ಎ’ ಗುಂಪಿನ ಮೊದಲ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 132 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿತು. ಆರಂಭಿಕ ಬ್ಯಾಟ್ಸ್‌ವುಮನ್‌ಗಳು ವೈಫಲ್ಯ ಅನುಭವಿಸಿದ ಈ ಇನಿಂಗ್ಸ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ (ಔಟಾಗದೆ 49; 46ಎಸೆತ, 3ಬೌಂಡರಿ) ಮತ್ತು ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್ (26; 33ಎ) ಮಹತ್ವದ ಕಾಣಿಕೆ ನೀಡಿದರು.

ಈ ಸಾಧಾರಣ ಗುರಿಯನ್ಜು ಬೇಗನೆ ತಲುಪುವ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದ ಆತಿಥೇಯ ತಂಡಕ್ಕೆ ಪೂನಂ (19ಕ್ಕೆ4) ಕಡಿವಾಣ ಹಾಕಿದರು. ಮಧ್ಯಮವೇಗಿ ಶಿಖಾ ಪಾಂಡೆ (14ಕ್ಕೆ3) ಬೆಂಬಲ ನೀಡಿದರು. ಕನ್ನಡತಿ ರಾಜೇಶ್ವರಿ ಗಾಯಕವಾಡ್ (31ಕ್ಕೆ1) ಮಹತ್ವದ ಸಮಯದಲ್ಲಿ ಬ್ರೇಕ್ ನೀಡಿದರು. ಇದರಿಂದಾಗಿ ಆಸ್ಟ್ರೇಲಿಯಾ ತಂಡವು 19.5 ಓವರ್‌ಗಳಲ್ಲಿ 115 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ADVERTISEMENT

ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ವುಮನ್ ಅಲೈಸಾ ಹೀಲಿ (51; 35ಎ, 6ಬೌಂ, 1ಸಿ) ಮತ್ತು ಮಧ್ಯಮಕ್ರಮಾಂಕದಲ್ಲಿ ಆ್ಯಷ್ಲೆ ಗಾರ್ಡನರ್ (34; 36ಎ, 3ಬೌಂ, 1ಸಿ) ಅವರಿಬ್ಬರೇ ಎರಡಂಕಿ ಮೊತ್ತ ಗಳಿಸಿದರು. ಆದರೆ, ಉಳಿದ ಬ್ಯಾಟ್ಸ್‌ವುಮನ್‌ಗಳ ಆಟ ನಡೆಯದಂತೆ ಬೌಲರ್‌ಗಳು ನೋಡಿಕೊಂಡರು.

ಹೀಲಿ ಮತ್ತು ಬೆತ್ ಮೂನಿ ಜೋಡಿಯು ಆರನೇ ಓವರ್‌ನವರೆಗೂ 32 ರನ್‌ ಕಲೆಹಾಕಿ ಉತ್ತಮ ಆರಂಭ ನೀಡಿದ್ದರು. ಆದರೆ, ಶಿಖಾ ಬೌಲಿಂಗ್‌ನಲ್ಲಿ ಮೂನಿ ಹೊಡೆದ ಚೆಂಡನ್ನು ಕ್ಯಾಚ್ ಮಾಡಿದ ‘ವಿಜಯಪುರದ ಆಟಗಾರ್ತಿ’ ರಾಜೇಶ್ವರಿ, ಆಸ್ಟ್ರೇಲಿಯಾದ ಕುಸಿತಕ್ಕೆ ಮುನ್ನುಡಿ ಬರೆದರು.

ಒಂಬತ್ತನೇ ಓವರ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್‌ ಲ್ಯಾನಿಂಗ್ ವಿಕೆಟ್ ಗಳಿಸುವಲ್ಲಿಯೂ ರಾಜೇಶ್ವರಿ ಸಫಲರಾದರು. ವಿಕೆಟ್‌ಕೀಪರ್ ತಾನಿಯಾ ಭಾಟಿಯಾ ಅವರ ಮಿಂಚಿನ ಕ್ಯಾಚಿಂಗ್ ಕೂಡ ಇಲ್ಲಿ ಪ್ರಮುಖವಾಗಿತ್ತು. ಈ ಹಂತದಿಂದ ಪೂನಂ ತಮ್ಮ ಬೇಟೆಯನ್ನು ಆರಂಭಿಸಿದರು. ತಾನಿಯಾ ಈ ಪಂದ್ಯದಲ್ಲಿ ಎರಡು ಕ್ಯಾಚ್ ಮತ್ತು ಎರಡು ಸ್ಟಂಪಿಂಗ್ ಮಾಡಿ ಗಮನ ಸೆಳೆದರು.

ಅರ್ಧಶತಕ ಗಳಿಸಿದ್ದ ಹೀಲಿ ಅವರನ್ನು ಹತ್ತನೇ ಓವರ್‌ನಲ್ಲಿ ತಮ್ಮದೇ ಎಸೆತದಲ್ಲಿ ಕ್ಯಾಚ್ ಮಾಡಿದ ಪೂನಂ ಸಂಭ್ರಮಿಸಿದರು. 12ನೇ ಓವರ್‌ ಬೌಲಿಂಗ್ ಮಾಡಿದ ಹೀಲಿ, ಸತತ ಎರಡು ಎಸೆತಗಳಲ್ಲಿ ರಚೆಲ್ ಹೇನ್ಸ್ ಮತ್ತು ಎಲೈಸ್ ಪೆರಿ ವಿಕೆಟ್‌ಗಳನ್ನು ಗಳಿಸಿ ಬಲವಾದ ಪೆಟ್ಟು ಕೊಟ್ಟರು. ತಮ್ಮ ಇನ್ನೊಂದು ಓವರ್‌ನಲ್ಲಿ ಜೆಸ್ ಜಾನಸೆನ್ ಅವರಿಗೂ ಪೂನಂ ಆಘಾತ ನೀಡಿದರು. ಇದೆಲ್ಲದರ ನಡುವೆ ಆ್ಯಷ್ಲೆ ಗಾರ್ಡನರ್ ಮಾತ್ರ ದಿಟ್ಟ ಹೋರಾಟ ಮಾಡಿದರು. ಕೊನೆಯ ಓವರ್‌ನಲ್ಲಿ ಶಿಖಾ ಪಾಂಡೆಗೆ ವಿಕೆಟ್‌ ಒಪ್ಪಿಸುವವರೆಗೂ ಬೌಲರ್‌ಗಳಿಗೆ ಆತಂಕ ಒಡ್ಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.