ಶಾರ್ಜಾ: ಮಧ್ಯಮವೇಗಿ ರಿತು ಮೋನಿ ಅವರ ನಿಖರ ದಾಳಿಯ ನೆರವಿನಿಂದ ಆತಿಥೇಯ ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ ದಿಟ್ಟ ಹೋರಾಟವನ್ನು ಮೀರಿ ನಿಂತ ಬಾಂಗ್ಲಾ 16 ರನ್‌ಗಳ ಜಯ ಸಾಧಿಸಿತು. ಟಾಸ್ ಗೆದ್ದ ಬಾಂಗ್ಲಾ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 119 ರನ್ ಗಳಿಸಿತು.
ಆರಂಭಿಕ ಬ್ಯಾಟರ್ ಶತಿ ರಾಣಿ (29; 32ಎ) ಹಾಗೂ ಶೋಭನಾ ಮೊಸ್ತಾರಿ (36; 38ಎ) ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಆದರೆ ಉಳಿದ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸಲಿಲ್ಲ. ಸ್ಕಾಟ್ಲೆಂಡ್ ತಂಡದ ಸಾಸ್ಕಿಯಾ ಹಾರ್ಲಿ (13ಕ್ಕೆ3) ಉತ್ತಮ ದಾಳಿ ನಡೆಸಿದರು.
ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡಕ್ಕೆ ಸಾರಾ ಬ್ರೈಸ್ (ಔಟಾಗದೆ 49; 52ಎ, 4X1) ದಿಟ್ಟ ಹೋರಾಟ ಮಾಡಿದರು. ಇದರಿಂದಾಗಿ ಒಂದು ಹಂತದಲ್ಲಿ ಸ್ಕಾಟ್ಲೆಂಡ್ ಜಯಿಸುವ ನಿರೀಕ್ಷೆ ಮೂಡಿತ್ತು. ಆದರೆ ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಸಾಮರ್ಥ್ಯ ತೋರಲಿಲ್ಲ. ಬೌಲರ್ ರಿತು (15ಕ್ಕೆ2) ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವಿಕೆಟ್ ಗಳಿಸಿದರು.
ಅಂತಿಮ ಹಂತದ ಓವರ್‌ಗಳಲ್ಲಿ ಬಾಂಗ್ಲಾ ಬೌಲರ್‌ಗಳು ರನ್‌ಗಳಿಗೆ ಕಡಿವಾಣ ಹಾಕಿದರು. ಇದರಿಂದಾಗಿ ಸ್ಕಾಟ್ಲೆಂಡ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 103 ರನ್ ಗಳಿಸಿ ಪರಾಭವಗೊಂಡಿತು.
ಬಾಂಗ್ಲಾ ತನ್ನ ಮುಂದಿನ ಪಂದ್ಯದಲ್ಲಿ ಅಕ್ಟೋಬರ್ 5ರಂದು ಇಂಗ್ಲೆಂಡ್ ಎದುರು ಕಣಕ್ಕಿಳಿಯಲಿದೆ. ಸ್ಕಾಟ್ಲೆಂಡ್‌ಗೆ ಅಕ್ಟೋಬರ್ 6ರಂದು ವೆಸ್ಟ್ ಇಂಡೀಸ್ ಸವಾಲೊಡ್ಡಲಿದೆ.
ಸಂಕ್ಷಿಪ್ತ ಸ್ಕೋರು
ಬಾಂಗ್ಲಾದೇಶ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 119 (ಶಾಂತಿ ರಾಣಿ 29, ಶೋಭನಾ ಮೊಸ್ತಾರಿ 36, ನಿಜರ್ ಸುಲ್ತಾನಾ 18, ಸಾಸ್ಕಿಯಾ ಹಾರ್ಲಿ 13ಕ್ಕೆ3)
ಸ್ಕಾಟ್ಲೆಂಡ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 103 (ಸಾರಾ ಬ್ರೈಸ್ ಔಟಾಗದೆ 49, ರಿತು ಮೋನಿ 15ಕ್ಕೆ2) ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ 16 ರನ್‌ಗಳ ಜಯ.
ಪಂದ್ಯದ ಆಟಗಾರ್ತಿ: ರಿತು ಮೋನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.