ADVERTISEMENT

Women's T20 World Cup: ನ್ಯೂಜಿಲೆಂಡ್ ಎದುರು ಶುಭಾರಂಭದ ವಿಶ್ವಾಸದಲ್ಲಿ ಭಾರತ

ಭಾರತದ ವನಿತೆಯರಿಗೆ ಕಿವೀಸ್ ಸವಾಲು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 21:30 IST
Last Updated 3 ಅಕ್ಟೋಬರ್ 2024, 21:30 IST
ಭಾರತ ತಂಡದ ಸ್ಮೃತಿ ಮಂದಾನ ಮತ್ತು ಹರ್ಮನ್‌ಪ್ರೀತ್ ಕೌರ್   
ಭಾರತ ತಂಡದ ಸ್ಮೃತಿ ಮಂದಾನ ಮತ್ತು ಹರ್ಮನ್‌ಪ್ರೀತ್ ಕೌರ್      

ದುಬೈ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ವನಿತೆಯರ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಶುಕ್ರವಾರ ಅಭಿಯಾನ ಆರಂಭಿಸಲಿದೆ. ಎ ಗುಂಪಿನ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ಈ ಬಾರಿ ತಂಡವು ವಿಶ್ವಕಪ್ ಜಯಿಸಬೇಕೆಂದರೆ ಅನುಭವಿ ಆಟಗಾರ್ತಿಯರು ಜವಾಬ್ದಾರಿಯುತ ಆಟವಾಡಲೇಬೇಕಾದ ಅನಿವಾರ್ಯತೆ ಇದೆ. 2020ರಲ್ಲಿ ಮೆಲ್ಬರ್ನ್‌ನಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡಕ್ಕೆ ವಿಜಯ ಒಲಿದಿರಲಿಲ್ಲ. ಅಲ್ಪ ಅಂತರದಲ್ಲಿ ವಿಶ್ವಕಪ್ ಕೈತಪ್ಪಿತ್ತು. ಆ ಟೂರ್ನಿಯಲ್ಲಿ ಆಡಿರುವ ಅನುಭವಿಗಳ ಜೊತೆಗೆ ಹೊಸಪ್ರತಿಭೆಗಳೂ ಈ ಬಾರಿ ತಂಡದಲ್ಲಿವೆ.

ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾದಷ್ಟೇ ಸಮರ್ಥ ಆಟಗಾರ್ತಿಯರು ಭಾರತ ತಂಡದಲ್ಲಿದ್ದಾರೆ. ಆದರೂ ಇದುವರೆಗೆ ಒಂದೂ ವಿಶ್ವಕಪ್ ಜಯಿಸಲು ತಂಡಕ್ಕೆ ಸಾಧ್ಯವಾಗಿಲ್ಲ. ಈ ಬಾರಿ ಪ್ರಶಸ್ತಿ ಬರ ನೀಗಿಸುವ ಅವಕಾಶ ಒದಗಿಬಂದಿದೆ. ತಂಡದ ಆಟಗಾರ್ತಿಯರಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ವಿಶೇಷ ತರಬೇತಿ ನೀಡಲಾಗಿದೆ.

ADVERTISEMENT

ನ್ಯೂಜಿಲೆಂಡ್ ತಂಡವು ಆಸ್ಟ್ರೇಲಿಯಾದಷ್ಟು ಬಲಾಢ್ಯವಾಗಿಲ್ಲ. ಆದರೆ ಎರಡು ಬಾರಿ ರನ್ನರ್ಸ್ ಅಪ್ ಆಗಿರುವ ಕಿವೀಸ್ ವನಿತೆಯರು ಕಠಿಣ ಪೈಪೋಟಿಯೊಡ್ಡುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ ಕಿವೀಸ್ ಎದುರಿಗೆ ಜಯಿಸುವುದರಿಂದ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚುವುದಂತೂ ದಿಟ.

35 ವರ್ಷದ ಹರ್ಮನ್‌ಪ್ರೀತ್, ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ, ಜಿಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ಅಲ್‌ರೌಂಡರ್ ದೀಪ್ತಿ ಶರ್ಮಾ ಅವರು ತಮ್ಮ ಅನುಭವಕ್ಕೆ ತಕ್ಕ ಆಟ ಆಡಿದರೆ ಯಶಸ್ಸಿನ ಹಾದಿ ಸುಲಭ. ಶಫಾಲಿ ಮತ್ತು ಮಂದಾನ ಅವರು ಉತ್ತಮ ಲಯದಲ್ಲಿದ್ದಾರೆ. ಮಂದಾನ ಅವರು ಕಳೆದ ಐದು ಟಿ20 ಇನಿಂಗ್ಸ್‌ಗಳಲ್ಲಿ 3 ಅರ್ಧಶತಕ ಗಳಿಸಿದ್ದಾರೆ. ಶಫಾಲಿ ಮತ್ತು ಕೌರ್ ಅವರು ಕೆಲವು ಇನಿಂಗ್ಸ್‌ಗಳಲ್ಲಿ ಚೆನ್ನಾಗಿ ಆಡಿದ್ದಾರೆ. ಆದರೆ ಸ್ಥಿರ ಪ್ರದರ್ಶನ ನೀಡುವ ಅಗತ್ಯವಿದೆ.

ಇಲ್ಲಿಯ ಧಗೆಯ ವಾತಾವರಣ ಮತ್ತು ಪಿಚ್‌ಗಳಲ್ಲಿ ಬೌಲರ್‌ಗಳ ಸತ್ವಪರೀಕ್ಷೆಯಾಗಲಿದೆ. ಭಾರತ ತಂಡದಲ್ಲಿ ಮಧ್ಯಮವೇಗಿಗಳಾದ ರೇಣುಕಾ ಸಿಂಗ್, ಪೂಜಾ ವಸ್ತ್ರಕರ್ ಮತ್ತು ಅರುಂಧತಿ ರೆಡ್ಡಿ ಅವರ ಹೊಣೆ ಹೆಚ್ಚಿದೆ. ಸ್ಪಿನ್ ವಿಭಾಗದಲ್ಲಿಯೂ ಉತ್ತಮ ಬೌಲರ್‌ಗಳಿದ್ದಾರೆ.  ಲೆಗ್‌ಸ್ಪಿನ್ನರ್ ಆಶಾ ಶೋಭನಾ, ಎಡಗೈ ಸ್ಪಿನ್ನರ್ ರಾಧಾ ಯಾದವ್ ಮತ್ತು ಆಫ್‌ ಸ್ಪಿನ್ನರ್, ಕನ್ನಡತಿ ಶ್ರೇಯಾಂಕಾ ಪಾಟೀಲ ಅವರು ಪ್ರಮುಖರಾಗಿದ್ದಾರೆ.

ಕಿವೀಸ್ ತಂಡದ ಸೂಜಿ ಬೇಟ್ಸ್, ನಾಯಕಿ ಸೋಫಿ ಡಿವೈನ್, ಆಲ್‌ರೌಂಡರ್ ಅಮೆಲಿಯಾ ಕೆರ್ ಅವರನ್ನು ಕಟ್ಟಿಹಾಕುವುದು ಭಾರತಕ್ಕೆ ಪ್ರಮುಖ ಸವಾಲಾಗಲಿದೆ. 

ಶ್ರೇಯಾಂಕಾ ಪಾಟೀಲ 
ಇಂದಿನ ಪಂದ್ಯಗಳು
  1. ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ – ಆರಂಭ: ಮಧ್ಯಾಹ್ನ 3.30

  2. ಭಾರತ vs ನ್ಯೂಜಿಲೆಂಡ್ – ಆರಂಭ: ರಾತ್ರಿ 7.30 

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ಹಾಟ್‌ಸ್ಟಾರ್ ಆ್ಯಪ್

ಭಾರತ – ನ್ಯೂಜಿಲೆಂಡ್ ಬಲಾಬಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.