ದುಬೈ: ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಭಾರತ ತಂಡದ ಬೌಲರ್‌ಗಳ ಶ್ರಮ ವ್ಯರ್ಥವಾಗದಂತೆ ನೋಡಿಕೊಂಡರು. 24 ಎಸೆತಗಳಲ್ಲಿ 29 ರನ್ ಗಳಿಸಿದ ಕೌರ್ ಬ್ಯಾಟಿಂಗ್‌ನಿಂದಾಗಿ ಭಾರತವು ಇಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಜಯ ಸಾಧಿಸಿತು.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಜಯಿಸಿದ ಕೌರ್ ಬಳಗದ ಸೆಮಿಫೈನಲ್ ಪ್ರವೇಶದ ಅವಕಾಶ ಜೀವಂತವಾಗುಳಿಯಿತು. ಎ ಗುಂಪಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಭಾರತ ಸೋಲನುಭವಿಸಿತ್ತು. ಆಗ ಮಾಡಿದ್ದ ಲೋಪಗಳನ್ನು ತಿದ್ದಿಕೊಂಡು ಇಲ್ಲಿ ಕಣಕ್ಕಿಳಿದ ಭಾರತ ತಂಡವು ಯಶಸ್ಸು ಸಾಧಿಸಿತು.
ಟಾಸ್ ಗೆದ್ದ ಪಾಕಿಸ್ತಾನ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡದ ಮಧ್ಯಮವೇಗಿ ಅರುಂಧತಿ ರೆಡ್ಡಿ (19ಕ್ಕೆ3) ಮತ್ತು ಕರ್ನಾಟಕದ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ (12ಕ್ಕೆ2) ಅವರ ದಾಳಿಯ ಮುಂದೆ ಪಾಕ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 105 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.
ಕಿವೀಸ್ ಎದುರಿನ ಪಂದ್ಯದಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದ ಶ್ರೇಯಾಂಕ ಪಾಕ್ ಎದುರು ನಿಖರ ದಾಳಿ ನಡೆಸಿದರು. ಅವರ 4 ಓವರ್‌ಗಳಲ್ಲಿ 1 ಮೇಡನ್ ಕೂಡ ಇತ್ತು. ಅರುಂಧತಿ ಬೌಲಿಂಗ್ ಶಿಸ್ತುಬದ್ಧವಾಗಿತ್ತು. ಲೈನ್ ಮತ್ತು ಲೆಂಗ್ತ್ ಕಾಪಾಡಿಕೊಂಡ ಅವರ ಎಸೆತಗಳನ್ನು ಎದುರಿಸುವಲ್ಲಿ ಪಾಕ್ ಬ್ಯಾಟರ್‌ಗಳು ವಿಫಲರಾದರು. ಅರುಂಧತಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಐದನೇ ಓವರ್‌ನಲ್ಲಿ ಮೊದಲ ಆಘಾತ ಎದುರಾಯಿತು. ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ (7 ರನ್) ಅವರ ವಿಕೆಟ್ ಗಳಿಸಿದ ಸಾದಿಯಾ ಇಕ್ಬಾಲ್ ಸಂಭ್ರಮಿಸಿದರು. ಈ ಹಂತದಲ್ಲಿ ಶಫಾಲಿ ವರ್ಮಾ (32; 35ಎ) ಮತ್ತು ಜೆಮಿಮಾ ರಾಡ್ರಿಗಸ್ (23; 28ಎ) ಎರಡನೇ ವಿಕೆಟ್‌ಗೆ 43 ರನ್ ಸೇರಿಸಿದರು. 12ನೇ ಓವರ್‌ನಲ್ಲಿ ಶಫಾಲಿ ಔಟಾಗಿದ್ದರಿಂದ ಜೊತೆಯಾಟ ಮುರಿಯಿತು.
ಇದಾಗಿ 3 ಓವರ್‌ಗಳ ನಂತರ ಪಾಕ್ ತಂಡದ ನಾಯಕಿ ಫಾತಿಮಾ ಸನಾ ಅವರು ಒಂದೇ ಓವರ್‌ನಲ್ಲಿ ಜೆಮಿಮಾ ಮತ್ತು ರಿಚಾ ಘೋಷ್ ಅವರಿಬ್ಬರನ್ನೂ ಔಟ್ ಮಾಡಿದರು. ಇದರಿಂದಾಗಿ ರನ್ ಗಳಿಕೆಯ ವೇಗ ಕುಂಠಿತವಾಯಿತು. ಒಂದು ಹಂತದಲ್ಲಿ 30 ಎಸೆತಗಳಿಗೆ 29 ರನ್‌ಗಳ ಅಗತ್ಯವಿತ್ತು. ಇದು ಭಾರತ ತಂಡದಲ್ಲಿ ತುಸು ಆತಂಕ ಮೂಡಿಸಿತು.
ಈ ಹಂತದಲ್ಲಿ ತಾಳ್ಮೆಯುತವಾಗಿ ಆಡಿದ ಹರ್ಮನಪ್ರೀತ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು. ಆದರೆ, 19ನೇ ಓವರ್‌ನಲ್ಲಿ ಓಡುವ ಪ್ರಯತ್ನದಲ್ಲಿ ಆಯ ತಪ್ಪಿ ಬಿದ್ದ ಅವರು ಕುತ್ತಿಗೆ ನೋವಿನಿಂದಾಗಿ ಆಟ ಮೊಟಕುಗೊಳಿಸಿ ಡಗ್‌ಔಟ್‌ಗೆ ಮರಳಿದರು. ಕ್ರೀಸ್‌ಗೆ ಬಂದ ಸಜೀವನ್ ಸಜನಾ ವಿಜಯದ ಬೌಂಡರಿ ಬಾರಿಸಿದರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 105 (ಮುನೀಬಾ ಅಲಿ 17, ನಿದಾ ದಾರ್ 28; ಅರುಂಧತಿ ರೆಡ್ಡಿ 19ಕ್ಕೆ 3, ಶ್ರೇಯಾಂಕಾ ಪಾಟೀಲ 12ಕ್ಕೆ 2).
ಭಾರತ: 18.5 ಓವರ್‌ಗಳಲ್ಲಿ 4ಕ್ಕೆ 108 (ಶೆಫಾಲಿ ವರ್ಮಾ 32, ಜೆಮಿಯಾ ರಾಡ್ರಿಗಸ್ 23, ಹರ್ಮನ್‌ಪ್ರೀತ್ 29; ಫಾತಿಮಾ ಸನಾ 23ಕ್ಕೆ 2).
ಫಲಿತಾಂಶ: ಭಾರತಕ್ಕೆ ಆರು ವಿಕೆಟ್ ಜಯ: ಪಂದ್ಯದ ಆಟಗಾರ್ತಿ: ಅರುಂಧತಿ ರೆಡ್ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.