ಶಾರ್ಜಾ: ಸೆಮಿಫೈನಲ್ ಪ್ರವೇಶಿಸಲು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಭಾರತ ತಂಡವು ಭಾನುವಾರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 9 ರನ್‌ಗಳಿಂದ ರೋಚಕ ಸೋಲು ಕಂಡಿತು.
152 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತ ತಂಡವು ನಾಯಕಿ ಹರ್ಮನ್‌ಪ್ರೀತ್ ಕೌರ್ (ಔಟಾಗದೇ 54;47ಎ) ಅವರ ಅರ್ಧಶತಕ ಹಾಗೂ ದೀಪ್ತಿ ಶರ್ಮಾ (29) ಮತ್ತು ಶಫಾಲಿ ವರ್ಮಾ (20) ಅವರ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್‌ಗೆ 142 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಭಾರತದ ಸೆಮಿಫೈನಲ್ ಭವಿಷ್ಯ ಈಗ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ಕೈಯಲ್ಲಿದೆ.
ಭಾರತ ತಂಡವು ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡನ್ನು ಗೆದ್ದು, ಮತ್ತೆರಡರಲ್ಲಿ ಸೋತು ನಾಲ್ಕು ಅಂಕದೊಂದಿಗೆ ಎ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನಾಲ್ಕೂ ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಎಂಟು ಅಂಕಗಳೊಂದಿಗೆ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು.
ಸೋಮವಾರ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿದ್ದು,
ಸೆಮಿಫೈನಲ್ ಪ್ರವೇಶಿಸುವ ಎರಡನೇ ತಂಡದ ನಿರ್ಧಾರಕ್ಕಾಗಿ ಅದರ ಫಲಿತಾಂಶ ನಿರ್ಣಾಯಕವಾಗಿದೆ. ಪಾಕ್ ಗೆದ್ದರೆ ಮಾತ್ರ ಭಾರತಕ್ಕೆ ಸೆಮಿಫೈನಲ್ ಅವಕಾಶ ಸಿಗುವ ಸಾಧ್ಯತೆಯಿದೆ. ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು ನಾಲ್ಕು ಅಂಕ ಸಂಪಾದಿಸಿರುವ ಕಿವೀಸ್, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನೆಟ್ ರನ್‌ರೇಟ್ ಆಧಾರದಲ್ಲಿ ಭಾರತ (0.322) ನ್ಯೂಜಿಲೆಂಡ್‌ಗಿಂತ (0.282) ಮೇಲಿನ ಸ್ಥಾನದಲ್ಲಿದೆ. ಪಾಕಿಸ್ತಾನ (-0.488) ಮೂರರಲ್ಲಿ ಒಂದು ಪಂದ್ಯ ಮಾತ್ರ ಗೆದ್ದು, ಎರಡು ಪಾಯಿಂಟ್ಸ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಆರಂಭಿಕ ಬ್ಯಾಟರ್ ಗ್ರೇಸ್ ಹ್ಯಾರಿಸ್ (40; 41ಎ), ತಹಲಿಯಾ ಮೆಕ್‌ಗ್ರಾ (32ರನ್) ಮತ್ತು ಎಲೀಸ್ ಪೆರಿ (32; 23ಎ) ಅವರ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 151 ರನ್ ಗಳಿಸಿತು. ಭಾರತದ ರೇಣುಕಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 151 (ಗ್ರೇಸ್ ಹ್ಯಾರಿಸ್ 40, ತಹಲಿಯಾ ಮೆಕ್‌ಗ್ರಾ 32, ಎಲಿಸ್ ಪೆರಿ 32, ಫೊಯೆಬ್ ಲಿಚ್‌ಫೀಲ್ಡ್ 15, ರೇಣುಕಾ ಸಿಂಗ್ 24ಕ್ಕೆ2, ದೀಪ್ತಿ ಶರ್ಮಾ 28ಕ್ಕೆ2). ಭಾರತ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 142 (ಹರ್ಮನ್‌ಪ್ರೀತ್ ಕೌರ್ ಔಟಾಗದೇ 54, ದೀಪ್ತಿ ಶರ್ಮಾ 29, ಶಫಾಲಿ ವರ್ಮಾ 20; ಅನ್ನಾಬೆಲ್ ಸದರ್ಲ್ಯಾಂಡ್ 22ಕ್ಕೆ 2, ಸೋಫಿ ಮಾಲಿನೆ 32ಕ್ಕೆ 2). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 9 ರನ್‌ಗಳ ಜಯ. ಪಂದ್ಯದ ಆಟಗಾರ್ತಿ: ಸೋಫಿ ಮಾಲಿನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.