ಗೆಬೆಹಾ, ದಕ್ಷಿಣ ಆಫ್ರಿಕಾ: ಮಧ್ಯಮ ವೇಗಿ ರೇಣುಕಾ ಸಿಂಗ್ (15ಕ್ಕೆ 5) ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನದ ಹೊರತಾಗಿಯೂ ಭಾರತ ತಂಡ, ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಸೋಲಿನ ಕಹಿಯುಂಡಿತು.
ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡವನ್ನು 11 ರನ್‌ಗಳಿಂದ ಮಣಿಸಿದ ಇಂಗ್ಲೆಂಡ್, ಸೆಮಿಫೈನಲ್‌ನಲ್ಲಿ ಬಹುತೇಕ ಸ್ಥಾನ ಖಚಿತಪಡಿಸಿಕೊಂಡಿತು. ಹರ್ಮನ್‌ಪ್ರೀತ್ ಕೌರ್ ಬಳಗ ನಾಲ್ಕರಘಟ್ಟ ಪ್ರವೇಶಿಸಬೇಕಾದರೆ ಕೊನೆಯ ಲೀಗ್ ಪಂದ್ಯದವರೆಗೆ ಕಾಯಬೇಕಾಗಿದೆ.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 151 ರನ್ ಗಳಿಸಿದರೆ, ಭಾರತ ತಂಡ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿತು.
ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ (52 ರನ್, 41 ಎ., 4X7, 6X1) ಮತ್ತು ಕೊನೆಯಲ್ಲಿ ಅಬ್ಬರಿಸಿದ ರಿಚಾ ಘೋಷ್ (ಔಟಾಗದೆ 47, 34 ಎ., 4X4, 6X2) ಅವರು ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರೂ ಯಶ ಲಭಿಸಲಿಲ್ಲ. ಸಾರಾ ಗ್ಲೆನ್ (27ಕ್ಕೆ 2) ಒಳಗೊಂಡಂತೆ ಇಂಗ್ಲೆಂಡ್‌ನ ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿದರು.
ಸ್ಮೃತಿ ಹೊರತುಪಡಿಸಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ಔಟಾದದ್ದು ಮುಳುವಾಗಿ ಪರಿಣಮಿಸಿತು. ಮೊದಲ ಹತ್ತು ಓವರ್‌ಗಳಲ್ಲಿ ವೇಗವಾಗಿ ರನ್ ಪೇರಿಸಲು ಆಗಲಿಲ್ಲ. ಭಾರತದ ಗೆಲುವಿಗೆ ಕೊನೆಯ 4 ಓವರ್‌ಗಳಲ್ಲಿ 47 ರನ್‌ಗಳು ಬೇಕಿದ್ದವು. ರಿಚಾ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ಅಬ್ಬರದ ಆಟವಾಡಿದರೂ ಗೆಲುವು ದಕ್ಕಲಿಲ್ಲ.
ಇದಕ್ಕೂ ಮುನ್ನ ಇಂಗ್ಲೆಂಡ್ ತಂಡ, ರೇಣುಕಾ ಸಿಂಗ್ (15ಕ್ಕೆ 5) ಅವರ ಪ್ರಭಾವಿ ಬೌಲಿಂಗ್ ಹೊರತಾಗಿಯೂ ಸವಾಲಿನ ಮೊತ್ತ ಕಲೆಹಾಕಿತು.
ನಥಾಲಿ ಸಿವೆರ್ ಬ್ರಂಟ್ (50 ರನ್,42 ಎ., 4X5) ಮತ್ತು ಆ್ಯಮಿ ಜೋನ್ಸ್ (40, 27 ಎ., 4X3, 6X2) ಅವರು ಇಂಗ್ಲೆಂಡ್ ನೆರವಿಗೆ ನಿಂತರು. ಹೆಥರ್ ನೈಟ್ 28 ರನ್ ಗಳಿಸಿದರು. ಆ್ಯಮಿ ಅವರು ಕೊನೆಯ ಓವರ್‌ಗಳಲ್ಲಿ ರನ್ ವೇಗ ಹೆಚ್ಚಿಸಿದರು. ರೇಣುಕಾ ಅವರಿಗೆ ಇತರ ಬೌಲರ್‌ಗಳಿಂದ ತಕ್ಕ ಬೆಂಬಲ ದೊರೆಯಲಿಲ್ಲ.
ಭಾರತ ತನ್ನ ಮುಂದಿನ ಪಂದ್ಯದಲ್ಲಿ ಫೆ.20 ರಂದು ಐರ್ಲೆಂಡ್‌ನ ಸವಾಲು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 151 (ನಥಾಲಿ ಸಿವೆರ್ ಬ್ರಂಟ್ 50, ಹೆಥರ್ ನೈಟ್ 28, ಆ್ಯಮಿ ಜೋನ್ಸ್ 40, ಸೋಫಿ ಎಕ್ಸ್‌ಲ್‌ಸ್ಟೋನ್ ಔಟಾಗದೆ 11, ರೇಣುಕಾ ಸಿಂಗ್ 15ಕ್ಕೆ 5, ಶಿಖಾ ಪಾಂಡೆ 20ಕ್ಕೆ 1, ದೀಪ್ತಿ ಶರ್ಮಾ 37ಕ್ಕೆ 1)
ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 140 (ಸ್ಮೃತಿ ಮಂದಾನ 52, ಶಫಾಲಿ ವರ್ಮಾ 8, ಜೆಮಿಮಾ ರಾಡ್ರಿಗಸ್ 13, ಹರ್ಮನ್‌ಪ್ರೀತ್ ಕೌರ್ 4, ರಿಚಾ ಘೋಷ್ ಔಟಾಗದೆ 47, ಸಾರಾ ಗ್ಲೆನ್ 27ಕ್ಕೆ 2, ಸೋಫಿ ಎಕ್ಸ್‌ಲ್‌ಸ್ಟೋನ್ 14ಕ್ಕೆ 1, ಲಾರೆನ್ ಬೆಲ್ 22ಕ್ಕೆ 1) ಫಲಿತಾಂಶ: ಇಂಗ್ಲೆಂಡ್‌ಗೆ 11 ರನ್ ಗೆಲುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.