ADVERTISEMENT

ಟ್ವೆಂಟಿ–20 ಕ್ರಿಕೆಟ್ ರ‍್ಯಾಂಕಿಂಗ್‌: ರಾಧಾ ಸ್ಥಾನ ಭದ್ರ

ದೀಪ್ತಿ, ಪೂನಮ್‌ಗೆ ಹಿನ್ನಡೆ

ಪಿಟಿಐ
Published 21 ಡಿಸೆಂಬರ್ 2019, 19:30 IST
Last Updated 21 ಡಿಸೆಂಬರ್ 2019, 19:30 IST
ರಾಧಾ ಯಾದವ್ –ಎಎಫ್‌ಪಿ ಚಿತ್ರ
ರಾಧಾ ಯಾದವ್ –ಎಎಫ್‌ಪಿ ಚಿತ್ರ   

ದುಬೈ: ಭಾರತದ ಎಡಗೈ ಸ್ಪಿನ್ನರ್ ರಾಧಾ ಯಾದವ್ ಐಸಿಸಿ ಮಹಿಳೆಯರ ಟ್ವೆಂಟಿ–20 ಕ್ರಿಕೆಟ್‌ನ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ದೀಪ್ತಿ ಶರ್ಮಾ ಮತ್ತು ಪೂನಂ ಯಾದವ್ ತಲಾ ಒಂದೊಂದು ಸ್ಥಾನವನ್ನು ಕಳೆದುಕೊಂಡಿದ್ದು ಕ್ರಮವಾಗಿ ಐದು ಮತ್ತು ಆರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಬ್ಯಾಟರ್‌ಗಳ ಪಟ್ಟಿಯಲ್ಲಿ ಜೆಮಿಮಾ ರಾಡ್ರಿಗಸ್, ಸ್ಮೃತಿ ಮಂದಾನ ಮತ್ತು ಹರ್ಮನ್‌ಪ್ರೀತ್ ಕೌರ್ ಕ್ರಮವಾಗಿ ನಾಲ್ಕು, ಏಳು ಮತ್ತು ಒಂಬತ್ತನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ತಂಡಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇಂಗ್ಲೆಂಡ್‌ನ ಸ್ಪಿನ್ನರ್‌ ಸೋಫಿ ಎಕ್ಲೆಸ್ಟೊನ್ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಆ್ಯಮಿ ಜೋನ್ಸ್‌ ವೃತ್ತಿ ಜೀವನದ ಗರಿಷ್ಠ ಸಾಧನೆ ಮಾಡಿದ್ದಾರೆ. ಸೋಫಿ ಮೂರು ಸ್ಥಾನಗಳ ಏರಿಕೆ ಕಂಡಿದ್ದು ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದಾರೆ. 700ಕ್ಕೂ ಅಧಿಕ ರ‍್ಯಾಂಕಿಂಗ್ ಪಾಯಿಂಟ್ ಗಳಿಸಿದ ಇಂಗ್ಲೆಂಡ್‌ನ ಎರಡನೇ ಬೌಲರ್‌ ಎಂಬ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. 2016ರಲ್ಲಿ ಅನ್ಯಾ ಶ್ರಬ್‌ಸೋಲ್ ಈ ಸಾಧನೆ ಮಾಡಿದ್ದರು.

ADVERTISEMENT

ಕ್ವಾಲಾಲಂಪುರದಲ್ಲಿ ಪಾಕಿಸ್ತಾನ ವಿರುದ್ಧ ನಡೆದಿದ್ದ ಸರಣಿಯಲ್ಲಿ 3–0 ಅಂತರದ ಜಯ ಸಾಧಿಸಲು ಸೋಫಿ ಮತ್ತು ಆ್ಯಮಿ ನೆರವಾಗಿದ್ದರು. ಸೋಫಿ,ಮೊದಲ ಪಂದ್ಯದಲ್ಲಿ ಮೂರು ವಿಕೆಟ್‌ ಒಳಗೊಂಡಂತೆ ಒಟ್ಟು ಆರು ವಿಕೆಟ್‌ಗಳನ್ನು ಕಬಳಿಸಿದ್ದರು. ಆ್ಯಮಿ ಜೋನ್ಸ್‌ 30 ಸ್ಥಾನಗಳ ಏರಿಕೆಯೊಂದಿಗೆ 17ನೇ ರ‍್ಯಾಂಕ್‌ ಗಳಿಸಿದ್ದಾರೆ. ಪಾಕಿಸ್ತಾನ ಎದುರು 179 ರನ್ ಕಲೆ ಹಾಕಿದ್ದ ಅವರು ಸರಣಿಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಮೆಗನ್ ಶೂಟ್ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದು ನ್ಯೂಜಿಲೆಂಡ್‌ನ ಸೂಸಿ ಬೇಟ್ಸ್‌ ಬ್ಯಾಟರ್‌ಗಳ ಪಟ್ಟಿಯ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.