ಆಕ್ಲೆಂಡ್ (ನ್ಯೂಜಿಲೆಂಡ್): ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾಯಕಿ ಮಿಥಾಲಿ ರಾಜ್ (68), ಯಷ್ಟಿಕಾ ಭಾಟಿಯಾ (59) ಹಾಗೂ ಹರ್ಮನ್‌ಪ್ರೀತ್ ಕೌರ್ (57*) ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಇಲ್ಲಿನ ಈಡನ್ ಪಾರ್ಕ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 277 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.
ಕೊನೆಯಲ್ಲಿ 34 ರನ್ ಗಳಿಸಿದ ಪೂಜಾ ವಸ್ತ್ರಕರ್ ಸಹ ಉಪಯುಕ್ತ ಕೊಡುಗೆಯನ್ನು ನೀಡಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತದ ಆರಂಭ ಉತ್ತಮವಾಗಿರಲಿಲ್ಲ. 28 ರನ್ ಗಳಿಸುವಷ್ಟರಲ್ಲಿಸ್ಮೃತಿ ಮಂದಾನ (10) ಹಾಗೂ ಶಫಾಲಿ ವರ್ಮಾ (12) ವಿಕೆಟ್‌ಗಳು ನಷ್ಟವಾದವು.
ಈ ಹಂತದಲ್ಲಿ ಜೊತೆಗೂಡಿದ ಮಿಥಾಲಿ ಹಾಗೂ ಯಷ್ಟಿಕಾ ತಂಡವನ್ನು ನಿಧಾನವಾಗಿ ಮುನ್ನಡೆಸಿದರು. ಮೂರನೇ ವಿಕೆಟ್‌ಗೆ 130 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದ ಈ ಜೋಡಿಯು ತಂಡಕ್ಕೆ ಆಸರೆಯಾದರು.
ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಮಿಥಾಲಿ, ಏಕದಿನ ಕ್ರಿಕೆಟ್‌ನಲ್ಲಿ 63ನೇ ಅರ್ಧಶತಕ ಸಾಧನೆ ಮಾಡಿದರು. 96 ಎಸೆತಗಳನ್ನು ಎದುರಿಸಿದ ಮಿಥಾಲಿ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.
ನಾಯಕಿಗೆ ತಕ್ಕ ಸಾಥ್ ನೀಡಿದ ಯಷ್ಟಿಕಾ 83 ಎಸೆತಗಳಲ್ಲಿ ಆರು ಬೌಂಡರಿ ನೆರವಿನಿಂದ 59 ರನ್ ಗಳಿಸಿದರು.
ಆದರೆ ಇವರಿಬ್ಬರ ವಿಕೆಟ್ ಪತನದ ಬೆನ್ನಲ್ಲೇ ಭಾರತ ಮಗದೊಮ್ಮೆ ಹಿನ್ನಡೆ ಅನುಭವಿಸಿತು. ವಿಕೆಟ್ ಕೀಪರ್ ರಿಚಾ ಘೋಷ್ (8) ಹಾಗೂ ಸ್ನೇಹಾ ರಾಣಾ (0) ವೈಫಲ್ಯ ಅನುಭವಿಸಿದರು.
ಕೊನೆಯಲ್ಲಿ ಪೂಜಾ ವಸ್ತ್ರಕರ್ ಜೊತೆ ಸೇರಿದ ಹರ್ಮನ್‌ಪ್ರೀತ್ ಎಂಟನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟ ಕಟ್ಟುವ ಮೂಲಕ ಸವಾಲಿನ ಮೊತ್ತ ಪೇರಿಸಲು ನೆರವಾದರು.
47 ಎಸೆತಗಳನ್ನು ಎದುರಿಸಿದ ಹರ್ಮನ್‌ಪ್ರೀತ್ ಆರು ಬೌಂಡರಿಗಳ ನೆರವಿನಿಂದ 57 ರನ್ ಗಳಿಸಿ ಅಜೇಯರಾಗಿ ಉಳಿದರು. ಇನ್ನೊಂದೆಡೆ ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ರನೌಟ್ ಆದ ಪೂಜಾ 28 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 34 ರನ್ ಗಳಿಸಿದರು.
ಆಸೀಸ್ ಪರ ಡಾರ್ಸಿ ಬ್ರೌನ್ ಮೂರು ಹಾಗೂ ಅಲ್ನಾ ಕಿಂಗ್ ಎರಡು ವಿಕೆಟ್ ಕಬಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.