ಬೆಂಗಳೂರು: ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಹೊಸ ಜೆರ್ಸಿಯನ್ನು ಬಿಸಿಸಿಐ ಅನಾವರಣಗೊಳಿಸಿದೆ.
‘3 ಕಾ ಡ್ರೀಮ್’ ಹಾಡಿನ ಮೂಲಕ ನೂತನ ಜೆರ್ಸಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. ಖ್ಯಾತ ಗಾಯಕ ರಫ್ತಾರ್ ಅವರು ಹಾಡಿರುವ ಈ ಹಾಡಿಗೆ ಟೀಂ ಇಂಡಿಯಾದ ಆಟಗಾರರು ನೂತನ ಜೆರ್ಸಿ ತೊಟ್ಟು ಹೆಜ್ಜೆ ಹಾಕಿದ್ದಾರೆ.
1983 ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿರುವ ಭಾರತ ಈ ಬಾರಿ ಮೂರನೇ ಬಾರಿ ವಿಶ್ವಕಪ್ ಟ್ರೋಪಿ ಎತ್ತಿ ಹಿಡಿಯುವ ಉಮೇದಿನಲ್ಲಿದೆ. ಹೀಗಾಗಿ ‘3 ಕಾ ಡ್ರೀಮ್’ ಎನ್ನುವ ಶೀರ್ಷಿಕೆಯಲ್ಲಿ ಹಾಡು ಬಿಡುಗಡೆ ಮಾಡಲಾಗಿದೆ.
ಈಗ ಇರುವ ಜೆರ್ಸಿಯಲ್ಲಿ ಪ್ರಯೋಜಕ ಸಂಸ್ಥೆ ಅಡಿಡಾಸ್ ಸ್ವಲ್ಪ ಬದಲಾವಣೆ ಮಾಡಿತ್ತು, ಭುಜದಲ್ಲಿ ಮೂರು ಬಿಳಿ ಬಣ್ಣದ ಗೆರೆಗಳಿಗೆ ಬದಲಾಗಿ ಕೇಸರಿ, ಬಿಳಿ, ಹಸಿರು ಬಣ್ಣದ ಗೆರೆಗಳನ್ನು ಹಾಕಲಾಗಿದೆ. ಎಡ ಎದೆಯ ಭಾಗದಲ್ಲಿ ಬಿಸಿಸಿಐನ ಲೋಗೊ ಇದ್ದು, ಎರಡು ವಿಶ್ವಕಪ್ ಗೆಲುವನ್ನು ಪ್ರತಿನಿಧಿಸುವ 2 ನಕ್ಷತ್ರಗಳ ಚಿತ್ರ ಇವೆ.
ಅ.8ರಂದು ಭಾರತ ತಂಡವು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.