ADVERTISEMENT

ENG Vs SA: ಕ್ಲಾಸೆನ್‌ ಅಬ್ಬರದ ಶತಕ: ಇಂಗ್ಲೆಂಡ್‌ ಗೆಲುವಿಗೆ 400 ರನ್‌ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2023, 13:27 IST
Last Updated 21 ಅಕ್ಟೋಬರ್ 2023, 13:27 IST
<div class="paragraphs"><p>ಶತಕ ಬಾರಿಸಿದ ಹೆನ್ರಿಚ್‌ ಕ್ಲಾಸೆನ್‌</p></div>

ಶತಕ ಬಾರಿಸಿದ ಹೆನ್ರಿಚ್‌ ಕ್ಲಾಸೆನ್‌

   

– ಪಿಟಿಐ ಚಿತ್ರ

ಮುಂಬೈ: ಹೆನ್ರಿಚ್‌ ಕ್ಲಾಸೆನ್‌ ಅವರ ಸ್ಫೋಟಕ ಶತಕದ ನೆರವಿನಿಂದಾಗಿ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದವರು 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 399ರನ್‌ಗಳ ಬೃಹತ್ ಮೊತ್ತ ಪೇರಿಸಿದರು.

ADVERTISEMENT

ಇದು ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡದ ವಿರುದ್ಧ ದಾಖಲಾದ ದೊಡ್ಡ ಮೊತ್ತ.

‌61 ಎಸೆತಗಳಲ್ಲಿ ಶತಕ ಗಳಿಸಿ ಕ್ಲಾಸೆನ್‌ ಅವರು, ಒಟ್ಟಾರೆಯಾಗಿ 67 ಎಸೆತಗಳಲ್ಲಿ 109ರನ್ ಗಳಿಸಿದರು. ಅವರ ಇನಿಂಗ್ಸ್ 12 ಫೋರ್‌ ಹಾಗೂ 4 ಸಿಕ್ಸರ್‌ಗಳಿಂದ ಕೂಡಿತ್ತು.

ಆರನೇ ವಿಕೆಟ್‌ಗೆ ಮಾರ್ಕೊ ಜಾನ್ಸೆನ್ ಅವರೊಂದಿಗೆ 76 ಎಸೆತಗಳಲ್ಲಿ 151ರನ್‌ಗಳ ಜತೆಯಾಟವಾಡಿದರು. ಜನ್‌ಸೆನ್‌ 42 ಎಸೆತಗಳಲ್ಲಿ 75 ರನ್‌ ಬಾರಿಸಿದರು.

ಟಾಸ್‌ ಗೆದ್ದ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಪಂದ್ಯದ ಎರಡನೇ ಎಸೆತದಲ್ಲಿಯೇ ಅಪಾಯಕಾರಿ ಕ್ವಿಂಟನ್ ಡಿ ಕಾಕ್ ಅವರನ್ನು ರೀಸ್‌ ಟಾಪ್ಲಿ ಅವರು ಶೂನ್ಯಕ್ಕೆ ಔಟ್ ಮಾಡಿದರು.

ಪಂದ್ಯದ ಆರಂಭಿಕ ಓವರ್‌ಗಳಲ್ಲಿ ಒತ್ತಡದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವು, ಟಾಪ್ಲಿ ಅವರು ಗಾಯಗೊಂಡು ಮೈದಾನದಿಂದ ಹೊರನಡೆದ ಬಳಿಕ ಲಯಕ್ಕೆ ಮರಳಿತು.

ರೀಜಾ ಹೆಂಡ್ರಿಕ್ಸ್‌ ಹಾಗೂ ರಸ್ಸೀ ವ್ಯಾನ್ ಡರ್ ದುಸಾನ್ ಅವರು ಎರಡನೇ ವಿಕೆಟ್‌ಗೆ 121ರನ್‌ಗಳ ಜತೆಯಾಟ ಆಡಿದರು. ಇವರ ಜತೆಯಾಟವನ್ನು ಆದಿಲ್ ರಶೀದ್‌ ಮುರಿದರು.

ಕ್ರಮವಾಗಿ 85 ಹಾಗೂ 60 ರನ್ ಗಳಿಸಿದ ಇವರನ್ನು ರಶೀದ್ ಅವರು ಔಟ್‌ ಮಾಡಿದರು.

ನಾಯಕ ತೆಂಬಾ ಬವುಮಾ ಅವರು ಅನಾರೋಗ್ಯಕ್ಕೀಡಾಗಿದ್ದರಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿ ಏಡನ್‌ ಮಾರ್ಕರಮ್ 42 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಡೇವಿಡ್‌ ಮಿಲ್ಲರ್‌ ಆಟ 5ರನ್‌ಳಿಗೆ ಅಂತ್ಯಗೊಂಡಿತು. ಇವರಿಬ್ಬರನ್ನೂ ಟಾಪ್ಲಿ ಪೆವಿಲಿಯನ್‌ಗೆ ಕಳುಹಿಸಿದರು.

ಟಾಪ್ಲಿ 3, ರಶೀದ್ ಹಾಗೂ ಗಸ್ ಅಟ್ಕಿನ್ಸನ್ ತಲಾ ಎರಡು ವಿಕೆಟ್‌ ಪಡೆದರು.

ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದ ಬೆನ್‌ ಸ್ಟೋಕ್ಸ್‌ ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ.

ಉಭಯ ತಂಡಗಳು ಕಳೆದ ಪಂದ್ಯದಲ್ಲಿ ಕ್ರಿಕೆಟ್‌ನ ಉದಯೋನ್ಮುಖ ತಂಡಗಳೊಂದಿಗೆ ಸೋಲು ಕಂಡಿದ್ದವು. ಇಂಗ್ಲೆಂಡ್ ಅಪ್ಗಾನಿಸ್ತಾನದ ವಿರುದ್ಧ ಸೋತರೆ, ದಕ್ಷಿಣ ಆಫ್ರಿಕಾ ನೆದೆರ್ಲೆಂಡ್ಸ್‌ ವಿರುದ್ಧ ಸೋಲು ಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.