ನವದೆಹಲಿ: ‘ನನ್ನ ಮಗ ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ, ಆತನಿಗೆ ಟೀಮ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಕ್ರೀಡಾ ಬದ್ಧತೆ ಮತ್ತು ಸಮರ್ಪಣಾ ಮನೋಭಾವವನ್ನು ಉದಾಹರಣೆಯಾಗಿಸಿಕೊಳ್ಳುವಂತೆ ಹೇಳುತ್ತೇನೆ’ ಎಂದು ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಬ್ರಯಾನ್ ಲಾರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತದಲ್ಲಿ ಇಂದು (ಶನಿವಾರ) ನಡೆದ ಕಾರ್ಯಕ್ರಮವೊಂದರಲ್ಲಿ ಲಾರಾ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ತವರಿನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅವರು ತೋರಿದ ಪ್ರದರ್ಶನವನ್ನು ಶ್ಲಾಘಿಸಿದ ಲಾರಾ, ‘ನನಗೆ ಒಬ್ಬ ಮಗನಿದ್ದಾನೆ. ಆತ ಯಾವುದೇ ಕ್ರೀಡೆಯನ್ನು ಆಡಬೇಕೆಂದು ಬಯಸಿದರೆ, ಕೊಹ್ಲಿಯಂತೆ ಕ್ರೀಡಾ ಬದ್ಧತೆ ಮತ್ತು ಸಮರ್ಪಣಾ ಮನೋಭಾವವನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲದ ಕಾರಣ ಕೊಹ್ಲಿಯವರ ಪ್ರದರ್ಶನವು ಅಪ್ರಸ್ತುತವಾಗುತ್ತದೆ ಎಂದು ಅನೇಕರು ಹೇಳುತ್ತಾರೆ ಅಥವಾ ಈಗಾಗಲೇ ಹೇಳಿದ್ದಾರೆ ಎಂದು ನನಗೆ ತಿಳಿದಿದೆ. ವಿರಾಟ್ ಶಿಸ್ತಿನ ಆಟದ ಮೂಲಕ ‘ಕ್ರಿಕೆಟ್ ಚಹರೆ’ಯನ್ನು ಬದಲಾಯಿಸಿದ್ದಾರೆ. ಜತೆಗೆ ಯುವ ಆಟಗಾರರು ಆಟಕ್ಕೆ ಹೇಗೆ ತಯಾರಿ ನಡೆಸಬೇಕು, ಯಾವ ಲಕ್ಷಣಗಳನ್ನು ಹೊಂದಿರಬೇಕು ಎಂಬುದಕ್ಕೆ ಕೊಹ್ಲಿ ಮಾದರಿಯಾಗಿದ್ದಾರೆ ಎಂದು ಲಾರಾ ಹೇಳಿಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ತರಬೇತಿಯ ಟೀಮ್ ಇಂಡಿಯಾ ಇತ್ತೀಚೆಗೆ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಅಹಮದಾಬಾದಿನಲ್ಲಿ ನ. 19ರಂದು ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೊದಲು ಸತತವಾಗಿ 10 ಪಂದ್ಯಗಳನ್ನು ಗೆದ್ದು ಅಜೇಯ ಸಾಧನೆ ಪ್ರದರ್ಶಿಸಿತ್ತು.
ಭಾರತದ 'ರನ್ ಮಷಿನ್' ಖ್ಯಾತಿಯ ವಿರಾಟ್ ಕೊಹ್ಲಿ ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.
ವಿಶ್ವಕಪ್ ಟೂರ್ನಿಯುದ್ದಕ್ಕೂ ರನ್ ಹೊಳೆ ಹರಿಸಿದ ಕೊಹ್ಲಿ, 11 ಪಂದ್ಯಗಳಲ್ಲಿ 3 ಶತಕ, 6 ಅರ್ಧಶತಕ ಸಹಿತ 765 ರನ್ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.