ADVERTISEMENT

ತಲೆಮಾರಿಗೊಬ್ಬರೇ ಧೋನಿ, ರಿಷಭ್ ಪಂತ್ ಟೀಕೆಗಳನ್ನು ಮೆಟ್ಟಿ ನಿಲ್ಲಲು ಬಿಡಿ: ಗಂಗೂಲಿ

ಏಜೆನ್ಸೀಸ್
Published 6 ಡಿಸೆಂಬರ್ 2019, 12:28 IST
Last Updated 6 ಡಿಸೆಂಬರ್ 2019, 12:28 IST
   

ಕೋಲ್ಕತ್ತ: ಬ್ಯಾಟಿಂಗ್‌ ಹಾಗೂ ವಿಕೆಟ್‌ ಕೀಪಿಂಗ್‌ ವೈಫಲ್ಯದಿಂದಾಗಿ ಒತ್ತಡಕ್ಕೊಳಗಾಗಿರುವ ರಿಷಭ್‌ ಪಂತ್‌ ಅವರನ್ನು ಬೆಂಬಲಿಸುವಂತೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗುರುವಾರಮನವಿ ಮಾಡಿದ್ದರು. ಆದರೆ, ಕೊಹ್ಲಿ ನಿಲುವಿಗೆ ವ್ಯತಿರಿಕ್ತ ಹೇಳಿಕೆ ನೀಡಿರುವ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಪಂತ್‌ ತಮ್ಮ ವಿರುದ್ಧದ ಟೀಕೆಗಳನ್ನು ಮೆಟ್ಟಿ ನಿಲ್ಲಲು ಮುಂದಾಗಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹಿರಿಯ ಆಟಗಾರಮಹೇಂದ್ರ ಸಿಂಗ್‌ ದೋನಿಬದಲು ರಿಷಭ್‌ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ಧದ ಸರಣಿ ವೇಳೆ ಧೋನಿ ಅಭಿಮಾನಿಗಳು ಪಂತ್‌ ವಿಕೆಟ್‌ ಕೀಪಿಂಗ್‌ ಮಾಡುವ ಸಂದರ್ಭ ‘ಧೋನಿ, ಧೋನಿ’ ಎಂದು ಕೂಗಿದ್ದರು. ಮಾತ್ರವಲ್ಲದೆ ವಿಕೆಟ್‌ ಕೀಪಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಪಂತ್‌ ವಿಂಡೀಸ್‌ ಸರಣಿಯಲ್ಲಿ ಮಿಂಚಲೇಬೇಕಾದ ಒತ್ತಡದಲ್ಲಿದ್ದಾರೆ.

ADVERTISEMENT

ಈ ಕುರಿತು ನಗರದಲ್ಲಿ ಮಾತನಾಡಿರುವ ಗಂಗೂಲಿ, ‘ಈ ಒತ್ತಡವು ಯುವ ಕ್ರಿಕೆಟಿಗನಿಗೆ ಒಳ್ಳೆಯದು. ಏಕೆಂದರೆ ಅದು ಆತ ಮೇಲೇಳಲು ನೆರವಾಗಬಲ್ಲದು. ಒತ್ತಡ ಎಂಬುದು ಅವಕಾಶ ಬಳಸಿಕೊಳ್ಳಲು ಇರುವ ವಿಧಾನ ಎಂದು ವೈಯಕ್ತಿಕವಾಗಿ ನನಗನಿಸುತ್ತದೆ. ಕಳೆದ ವರ್ಷ ಡೆಲ್ಲಿ(ಡೆಲ್ಲಿ ಕ್ಯಾಪಿಟಲ್ಸ್‌) ಪರ ಆಡುತ್ತಿದ್ದಾಗ,ಪಂತ್‌ ತಂಡದ ಪ್ರಮುಖ ಆಟಗಾರನಾಗಿದ್ದ. ಕಿಕ್ಕಿರಿದು ತುಂಬಿರುತ್ತಿದ್ದ ಕ್ರೀಡಾಂಗಣದಲ್ಲಿ ಪಂದ್ಯ ಆಡುತ್ತಿದ್ದ. ಹಾಗಾಗಿ ಈಗಲೂ ಜವಾಬ್ದಾರಿ ತೆಗೆದುಕೊಳ್ಳುವುದು ದೊಡ್ಡ ವಿಷಯವೇನಲ್ಲ’ ಎಂದು ಸೌರವ್‌ ಅಭಿಪ್ರಾಯಪಟ್ಟಿದ್ದಾರೆ.

‘ಒಂದು ವೇಳೆ ನಾನು ವಿರಾಟ್‌ ಕೊಹ್ಲಿ ಸ್ಥಾನದಲ್ಲಿದ್ದಿದ್ದರೆ, ಪಂತ್‌ರನ್ನು ಅದೇ ಹಾದಿಯಲ್ಲಿ ಸಾಗಲು ಬಿಡುತ್ತಿದ್ದೆ. ಆ ಮೂಲಕ ಟೀಕೆಗಳಿಗೆ ಕಿವಿಗೊಡುವಂತೆ ಹಾಗೂ ಯಶಸ್ಸು ಕಂಡುಕೊಳ್ಳುವಂತೆ ಹೇಳುತ್ತಿದ್ದೆ. ಮಹೇಂದ್ರ ಸಿಂಗ್‌ ಧೋನಿಯನ್ನು ಪ್ರತಿದಿನವೂ ಪಡೆಯಲಾಗದು. ಅವರು ತಲೆಮಾರಿಗೊಬ್ಬ ಆಟಗಾರ ಎಂಬುದನ್ನು ಪ್ರತಿಯೊಬ್ಬರೂ ನೆನಪಿಡಬೇಕು’ ಎಂದು ಹೇಳಿದ್ದಾರೆ.

‘ಎಂಎಸ್‌ ಧೋನಿ ಕೂಡ ಕ್ರಿಕೆಟ್‌ ಬದುಕು ಆರಂಭಿಸಿದಾಗ ಈಗಿನ ಎಂಎಸ್‌ ಧೋನಿಯಾಗಿರಲಿಲ್ಲ. 15 ವರ್ಷಗಳೇ ಬೇಕಾಯಿತು ಅವರು ಎಂಎಸ್‌ ಧೋನಿ ಎನಿಸಿಕೊಳ್ಳಲು. ಹಾಗಾಗಿ ಧೋನಿಯಷ್ಟು ಸನಿಹಕ್ಕೆ ಸಾಗಲು ರಿಷಭ್‌ಗೂ 15 ವರ್ಷ ಬೇಕಾದೀತು. ಆ ನಿಟ್ಟಿನಲ್ಲಿ ಅದು (ಟೀಕೆ, ಒತ್ತಡ) ಅವರ ಮನಸ್ಥಿತಿಗೆ ಬಿಟ್ಟ ವಿಚಾರ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.