ADVERTISEMENT

ಮೊದಲ ಪಂದ್ಯ ರೋಹಿತ್ ಆಡದಿದ್ದರೆ ಸಂಪೂರ್ಣ ಸರಣಿಗೆ ಬೂಮ್ರಾ ನಾಯಕರಾಗಲಿ: ಗವಾಸ್ಕರ್

ಪಿಟಿಐ
Published 5 ನವೆಂಬರ್ 2024, 6:48 IST
Last Updated 5 ನವೆಂಬರ್ 2024, 6:48 IST
<div class="paragraphs"><p>ಜಸ್‌ಪ್ರೀತ್ ಬೂಮ್ರಾ, ರೋಹಿತ್ ಶರ್ಮಾ</p></div>

ಜಸ್‌ಪ್ರೀತ್ ಬೂಮ್ರಾ, ರೋಹಿತ್ ಶರ್ಮಾ

   

(ಪಿಟಿಐ ಚಿತ್ರ)

ನವದೆಹಲಿ: ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅಲಭ್ಯರಾದರೆ ಸಂಪೂರ್ಣ ಸರಣಿಯಲ್ಲಿ ಜಸ್‌ಪ್ರೀತ್ ಬೂಮ್ರಾ ತಂಡವನ್ನು ಮುನ್ನಡೆಸಬೇಕು ಎಂದು ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 3-0ರ ಅಂತರದ ಕ್ಲೀನ್-ಸ್ವೀಪ್ ಮುಖಭಂಗಕ್ಕೊಳಗಾಗಿರುವ ಭಾರತದ ಟೆಸ್ಟ್ ತಂಡವೀಗ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಐದು ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲಿದೆ.

ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಪ್ರವೇಶಿಸುವ ನಿಟ್ಟಿನಲ್ಲಿ ಮುಂಬರುವ ಪ್ರತಿಯೊಂದು ಪಂದ್ಯವೂ ಭಾರತದ ಪಾಲಿಗೆ ನಿರ್ಣಾಯಕವೆನಿಸಿದೆ. ಕನಿಷ್ಠ ನಾಲ್ಕು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ವೈಯಕ್ತಿಕ ಕಾರಣದಿಂದಾಗಿ ರೋಹಿತ್ ಮೊದಲ ಪಂದ್ಯವನ್ನು ಆಡುವುದಿಲ್ಲ ಎಂದು ವರದಿಯಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗವಾಸ್ಕರ್, 'ರೋಹಿತ್ ತಮ್ಮ ಇಚ್ಚೆಯಂತೆ ತಂಡಕ್ಕೆ ವಾಪಸ್ ಬರಲಿ. ಅಲ್ಲದೆ ಓರ್ವ ಆಟಗಾರನಾಗಿ ಆಡಲಿ' ಎಂದು ಹೇಳಿದ್ದಾರೆ.

ಭಾರತ-ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯ ಪರ್ತ್‌ನಲ್ಲಿ ನವೆಂಬರ್ 22ರಂದು ಆರಂಭವಾಗಲಿದೆ. ರೋಹಿತ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪಂದ್ಯಕ್ಕೆ ರೋಹಿತ್ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ.

'ತಂಡದ ನಾಯಕ ಮೊದಲ ಟೆಸ್ಟ್ ಪಂದ್ಯ ಆಡುವುದು ಅತ್ಯಂತ ಮುಖ್ಯವೆನಿಸುತ್ತದೆ. ನಾಯಕ ಗಾಯಗೊಂಡರೆ ಅದು ವಿಭಿನ್ನ ವಿಚಾರ. ಆದರೆ ಲಭ್ಯವಿಲ್ಲದಿದ್ದರೆ ಉಪನಾಯಕ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಾರೆ' ಎಂದು ಗವಾಸ್ಕರ್ ಹೇಳಿದ್ದಾರೆ.

'ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ರೋಹಿತ್ ಲಭ್ಯರಿರುವುದಿಲ್ಲ ಎಂದು ಗೊತ್ತಾಗಿದೆ. ಹಾಗಾದರೆ ಆಯ್ಕೆ ಸಮಿತಿಯು ಸಂಪೂರ್ಣ ಆಸ್ಟ್ರೇಲಿಯಾ ಸರಣಿಗೆ ಜಸ್‌ಪ್ರೀತ್ ಬೂಮ್ರಾ ಅವರನ್ನು ನಾಯಕರನ್ನಾಗಿ ನೇಮಕ ಮಾಡಬೇಕು. ಹಾಗೆಯೇ ರೋಹಿತ್ ಶರ್ಮಾ ಓರ್ವ ಆಟಗಾರನಾಗಿ ಮುಂದುವರಿಯಬೇಕು. ಮೊದಲ ಟೆಸ್ಟ್ ಪಂದ್ಯ ರೋಹಿತ್ ಆಡಬೇಕು ಎಂಬುದು ನನ್ನ ಅನಿಸಿಕೆಯಾಗಿದೆ' ಎಂದು ಅವರು ಹೇಳಿದ್ದಾರೆ.

ಅದೇ ಹೊತ್ತಿಗೆ ಡಬ್ಲ್ಯು‌ಟಿಸಿ ಫೈನಲ್‌ಗೆ ಭಾರತ ಪ್ರವೇಶಿಸುವುದು ಕಷ್ಟಸಾಧ್ಯ. ಈ ಕುರಿತು ಚಿಂತಿಸಬಾರದು. ಮೊದಲು ಸರಣಿ ಗೆಲ್ಲುವತ್ತ ಗಮನ ಕೇಂದ್ರೀಕರಿಸಬೇಕು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.