ADVERTISEMENT

ನಾನು ‘ನಾನ್‌ಸ್ಟ್ರೈಕರ್ ರನೌಟ್‌’ ಪರವಾಗಿದ್ದೇನೆ, ಅದು ಕಾನೂನಿನಲ್ಲಿದೆ: ಅರ್ಜುನ್

ಐಎಎನ್ಎಸ್
Published 18 ಜನವರಿ 2023, 7:15 IST
Last Updated 18 ಜನವರಿ 2023, 7:15 IST
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್   

ನವದೆಹಲಿ: ನಾನು ಸಂಪೂರ್ಣವಾಗಿ ‘ನಾನ್‌ಸ್ಟ್ರೈಕರ್ ರನೌಟ್‌’ ಪರವಾಗಿದ್ದೇನೆ. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂದು ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ, ಗೋವಾ ರಣಜಿ ತಂಡದ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಹೇಳಿದ್ದಾರೆ.

‘ನಾನ್‌ಸ್ಟ್ರೈಕರ್ ರನೌಟ್‌’ ಆಟದ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ ಎಂದು ಅರ್ಜುನ್ ತಿಳಿಸಿದ್ದಾರೆ.

‘ನಾನು ವೈಯಕ್ತಿಕವಾಗಿ ‘ನಾನ್‌ಸ್ಟ್ರೈಕರ್ ರನೌಟ್‌’ ಮಾಡುವುದಿಲ್ಲ. ಅದರಲ್ಲಿ ನನ್ನ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ, ಯಾರಾದರೂ ಅದನ್ನು ಮಾಡಿದರೆ, ನಾನು ಬೆಂಬಲಿಸುತ್ತೇನೆ’ ಎಂದಿದ್ದಾರೆ.

ADVERTISEMENT

ಪ್ರಸಕ್ತ ರಣಜಿ ಟೂರ್ನಿಯಲ್ಲಿ ಗೋವಾ ಪರ ಕಣಕ್ಕಿಳಿದಿರುವ ಅರ್ಜುನ್, ಸರ್ವಿಸಸ್ ವಿರುದ್ಧ ಆಡುತ್ತಿದ್ದಾರೆ.

ನಾನ್‌ಸ್ಟ್ರೈಕರ್ ರನ್‌ಔಟ್ ಮನವಿ ಹಿಂಪಡೆದ ರೋಹಿತ್
ಇತ್ತೀಚೆಗೆ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ‘ನಾನ್‌ಸ್ಟ್ರೈಕರ್‌ ರನ್‌ಔಟ್’ ಮನವಿಯೊಂದನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಿಂದೆಗೆದುಕೊಂಡರು.

ಪಂದ್ಯದ ಕೊನೆಯ ಓವರ್‌ನ ನಾಲ್ಕನೇ ಎಸೆತದ ಸಂದರ್ಭದಲ್ಲಿ ಲಂಕಾ ತಂಡದ ನಾಯಕ ದಸುನ್ ಶನಕಾ ಅವರು ನಾನ್‌ಸ್ಟ್ರೈಕರ್‌ ಕ್ರೀಸ್‌ನಿಂದ ಹೊರಗೆ ಸಾಗಿದ್ದರು. ಆಗ ಬೌಲರ್ ಮೊಹಮ್ಮದ್ ಶಮಿ ಬೇಲ್ಸ್‌ ಎಗರಿಸಿದರು. ವಿಕೆಟ್‌ಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ರೋಹಿತ್, ಮನವಿಯನ್ನು ಮರಳಿ ಪಡೆದರು. ಮತ್ತೊಂದು ವಿವಾದವಾಗುವುದನ್ನು ತಡೆದರು. ಆಗಿನ್ನೂ ಶನಕಾ ಶತಕಕ್ಕೆ ಎರಡು ರನ್‌ಗಳ ಅಗತ್ಯವಿತ್ತು.

ಐದನೇ ಎಸೆತವನ್ನು ಎದುರಿಸಿದ ಶನಕಾ ಬೌಂಡರಿ ಗಳಿಸಿ ಶತಕ ಪೂರೈಸಿದರು. ಕೊನೆಯ ಎಸೆತದಲ್ಲಿ ಸಿಕ್ಸರ್‌ ಹೊಡೆದರು.

ನಾನ್‌ಸ್ಟ್ರೈಕರ್ ರನೌಟ್‌: ಪಾಂಡ್ಯ ಪ್ರತಿಕ್ರಿಯೆ
‘ಕ್ರೀಡಾಸ್ಫೂರ್ತಿ ಎಂಬುದೇನಿಲ್ಲ. ಈ ಬಗ್ಗೆ ಚರ್ಚಿಸುವುದನ್ನು ನಿಲ್ಲಿಸಬೇಕು’–ಭಾರತ ಕ್ರಿಕೆಟ್ ತಂಡದ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ‘ನಾನ್‌ಸ್ಟ್ರೈಕರ್ ರನ್‌ಔಟ್ ’ ನಿಯಮದ ಕುರಿತು ನೀಡಿದ ಪ್ರತಿಕ್ರಿಯೆ ಇದು.

ಈ ಹಿಂದೆ ನಾನ್‌ಸ್ಟ್ರೈಕರ್‌ ಬ್ಯಾಟರ್‌ ಕ್ರೀಸ್‌ ಬಿಟ್ಟಾಗ, ಬೌಲರ್‌ ಎಸೆತ ಹಾಕುವ ಮುನ್ನವೇ ಔಟ್ ಮಾಡಿದರೆ ಅದನ್ನು ‘ನಿಯಮಬಾಹಿರ’, ‘ಕ್ರೀಡಾಸ್ಪೂರ್ತಿಗೆ ವಿರುದ್ಧ’ ಎನ್ನಲಾಗುತ್ತಿತ್ತು. ಆದರೆ ಎಂಸಿಸಿಯು ಈಚೆಗೆ ನಿಯಮ ತಿದ್ದುಪಡಿ ಮಾಡಿದೆ. ಆ ಪ್ರಕಾರ ಈ ರೀತಿ ಔಟ್ ಮಾಡುವುದು ನಿಯಮಬದ್ಧ ಹಾಗೂ ರನೌಟ್ ಎಂದು ಪರಿಗಣಿಸಲಾಗುತ್ತಿದೆ. ಅ. 1ರಿಂದ ಇದು ಜಾರಿಯಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂತಹೊಂದು ರನೌಟ್‌ ಅನ್ನು ಭಾರತದ ವಿನೂ ಮಂಕಡ್ ಮಾಡಿದ್ದರು. ಆದ್ದರಿಂದ ಅದನ್ನು ‘ಮಂಕಡಿಂಗ್’ ಎಂದೂ ಕರೆಯಲಾಗುತ್ತಿತ್ತು. ‘ನಾನು ನಾನ್‌ಸ್ಟ್ರೈಕರ್‌ನಲ್ಲಿದ್ದು ಕ್ರೀಸ್‌ನಿಂದ ಹೊರಗಿದ್ದಾಗ ಬೌಲರ್‌ ಔಟ್ ಮಾಡಿದರೆ ತಪ್ಪು ನನ್ನದೇ. ಅವರು ನಿಯಮವನ್ನು ಬಳಸಿಕೊಂಡಿದ್ದರಲ್ಲಿ ತಪ್ಪೇನಿಲ್ಲ’ ಎಂದು ಪಾಂಡ್ಯ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.