ADVERTISEMENT

ಐಪಿಎಲ್‌ ಮೆಗಾ ಹರಾಜು: ಏಳು ಆಟಗಾರರ ಶೋಧದಲ್ಲಿ ಡೆಲ್ಲಿ ಕ್ಯಾಪಿಟಲ್ಸ್

ಉತ್ತಮ ಆಟಗಾರರನ್ನು ಖರೀದಿಸುವ ವಿಶ್ವಾಸದಲ್ಲಿ ಆಮ್ರೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 1:27 IST
Last Updated 11 ಫೆಬ್ರುವರಿ 2022, 1:27 IST
ಸಂಜು ಸ್ಯಾಮ್ಸನ್ 
ಸಂಜು ಸ್ಯಾಮ್ಸನ್    

ಬೆಂಗಳೂರು: ನಾಲ್ವರು ಪ್ರಮುಖ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದೇವೆ. ಇನ್ನೂ ಏಳು ಪ್ರತಿಭಾವಂತ ಆಟಗಾರರನ್ನು ಗುರಿ ಇದೆ. ತಂಡವನ್ನು ಪರಿಪೂರ್ಣವಾಗಿ ಬಲಿಷ್ಠಗೊಳಿಸಲು ಮೆಗಾ ಹರಾಜಿನಲ್ಲಿ ಆಯ್ಕೆ ಮಾಡಲಾಗುವುದು ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಹಾಯಕ ಕೋಚ್ ಪ್ರವೀಣ ಆಮ್ರೆ ಹೇಳಿದರು.

ಇದೇ 12 ಮತ್ತು 13ರಂದು ನಗರದಲ್ಲಿ ಐಪಿಎಲ್‌ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಡೆಲ್ಲಿ ತಂಡವು ವಿಕೆಟ್‌ಕೀಪರ್ ರಿಷಭ್ ಪಂತ್, ಸ್ಪಿನ್ನರ್ ಅಕ್ಷರ್ ಪಟೇಲ್, ಆರಂಭಿಕ ಬ್ಯಾಟರ್ ಪೃಥ್ವಿ ಶಾ ಮತ್ತು ದಕ್ಷಿಣ ಆಫ್ರಿಕಾ ವೇಗಿ ಎನ್ರಿಚ್ ನಾಕಿಯಾ ಅವರನ್ನು ಉಳಿಸಿಕೊಂಡಿದೆ.

‘ಸಮತೋಲನವಾಗಿರುವ ತಂಡವಿರಬೇಕೆಂಬ ಆಶಯ ನಮ್ಮಂತಹ ಕೋಚ್‌ಗಳಿಗಿರುತ್ತದೆ. ನಾವು ಪ್ರಮುಖ ನಾಲ್ವರನ್ನು ಉಳಿಸಿಕೊಂಡಿರುವುದು ಉತ್ತಮ ಕೆಲಸವಾಗಿದೆ. ಅದರಲ್ಲಿ ಒಬ್ಬ ಆಲ್‌ರೌಂಡರ್ ಇದ್ದಾರೆ. ಇದರಿಂದಾಗಿ ಉತ್ತಮ ಅಡಿಪಾಯ ಹಾಕಿದಂತಾಗಿದೆ‘ ಎಂದು ಆಮ್ರೆ ಹೇಳಿದರು.

ADVERTISEMENT

‘ಈಗ ಉತ್ತಮವಾಗಿರುವ ಏಳು ಆಟಗಾರರನ್ನು ಆಯ್ಕೆ ಮಾಡಬೇಕಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ ಇದು ನಮ್ಮ ಗುರಿಯೂ ಹೌದು ಮತ್ತು ಸವಾಲು ಕೂಡ’ ಎಂದಿದ್ದಾರೆ.

ಗಟ್ಟಿ ನೆಲೆ ನಿರ್ಮಾಣದ ಗುರಿ

ಹರಾಜಿನಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡು ತಂಡಕ್ಕೆ ಗಟ್ಟಿ ನೆಲೆಯನ್ನು ನಿರ್ಮಿಸುವುದು ನಮ್ಮ ಗುರಿ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಈಗಾಗಲೇ ತಂಡದಲ್ಲಿ ಸಂಜು ಜೊತೆಗೆ ಇಂಗ್ಲೆಂಡ್ ವಿಕೆಟ್‌ಕೀಪರ್ ಜಾಸ್ ಬಟ್ಲರ್, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಉಳಿದುಕೊಂಡಿದ್ದಾರೆ. ತಂಡದ ಪರ್ಸ್‌ನಲ್ಲಿ ₹ 62 ಕೋಟಿ ಇದೆ. ಆದ್ದರಿಂದ ಶ್ರೇಷ್ಠ ಆಟಗಾರರನ್ನು ಸೇರ್ಪಡೆ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ.

‘ಮುಂದಿನ ಐದಾರು ವರ್ಷಗಳಿಗಾಗಿ ತಂಡವನ್ನು ಸಿದ್ಧಗೊಳಿಸಲು ಈ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡುವುದು ಮಹತ್ವದ್ದಾಗಿದೆ. ಪ್ರತಿಭಾವಂತರನ್ನು ಗುರುತಿಸಿ ಅವಕಾಶ ನೀಡಲು ಸಂಪೂರ್ಣ ಯೋಜನೆ ಸಿದ್ಧಪಡಿಸಿದ್ದೇವೆ’ ಎಂದು ಸಂಜು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.