ಲಂಡನ್: ‘ಭಾರತದಲ್ಲಿ ನನ್ನ ಮೇಲೆ ಸದಾ ಹೊಟ್ಟಿಕಿಚ್ಚುಪಡುವ ಜನರ ಒಂದು ಗುಂಪು ಇದೆ. ನನ್ನ ಎಲ್ಲ ವೈಫಲ್ಯವನ್ನೇ ಅವರೆಲ್ಲರೂ ಬಯಸುತ್ತಿದ್ದರು. ಅಂತಹವರೆದುರು ನನ್ನ ಚರ್ಮವನ್ನು ದಪ್ಪವಾಗಿಸಿಕೊಂಡೆ’ ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಹೇಳಿದ್ದಾರೆ.
ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡದ ನಿರ್ದೇಶಕರಾಗಿ ನೇಮಕವಾದ ಮಾಜಿ ಕ್ರಿಕೆಟಿಗ ರಾಬ್ ಕೀ ಅವರ ಕುರಿತು ರವಿ ‘ದ ಗಾರ್ಡಿಯನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ತಾವು 2014 ರಿಂದ 2021ರ ಅವಧಿಯಲ್ಲಿ ಭಾರತ ತಂಡಕ್ಕೆ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ ಉದಾಹರಣೆ ನೀಡಿದರು.
‘ನನಗೆ ಕೋಚಿಂಗ್ ಪ್ರಮಾಣಪತ್ರಗಳು ಅಥವಾ ಲೆವೆಲ್ ಒನ್, ಲೆವೆಲ್ ಟುನಂತಹ ಅರ್ಹತೆಗಳು ಇರಲಿಲ್ಲ. ಆದರೂ ನಾನು ಸಾಧಿಸಿದ ಯಶಸ್ಸಿನಿಂದ ಮತ್ಸರ ತೋರುವವರು ಬಹಳಷ್ಟು ಜನರು ಭಾರತದಲ್ಲಿದ್ದರು. ಆದರೆ ಡ್ಯುಕ್ ಬಾಲ್‌ಗೆ ಇರುವ ತೊಗಲಿಗಿಂತಲೂ ಹೆಚ್ಚು ನನ್ನ ಚರ್ಮ ದಪ್ಪ ಮಾಡಿಕೊಂಡೆ. ಅವರೆಲ್ಲರನ್ನೂ ಉದಾಸೀನ ಮಾಡಿದೆ. ರಾಬ್ ಕೂಡ ಅದೇ ರೀತಿಯಾಗಬೇಕು’ ಎಂದು ಸಲಹೆ ನೀಡಿದರು.
‘ಈ ಕೆಲಸದಲ್ಲಿ ನಮ್ಮನ್ನು ಪ್ರತಿದಿನವೂ ಪರೀಕ್ಷೆಗೊಡ್ಡುತ್ತಾರೆ. ರಾಬ್ ಕೀ ಗೆ ನಾಯಕರಾಗಿ ತಂಡವನ್ನು ನಡೆಸಿದಿ ಅನುಭವವಿದೆ. ಇದರಿಂದಾಗಿ ಆಟಗಾರರೊಂದಿಗೆ ಉತ್ತಮ ಸಂವಹನ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.