ADVERTISEMENT

IND vs AFG: ಭಾರತಕ್ಕೆ ಸರಣಿ ಕೈವಶ

ಪಿಟಿಐ
Published 14 ಜನವರಿ 2024, 16:31 IST
Last Updated 14 ಜನವರಿ 2024, 16:31 IST
<div class="paragraphs"><p>ಜೈಸ್ವಾಲ್‌</p></div>

ಜೈಸ್ವಾಲ್‌

   

ಇಂದೋರ್: ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಭಾರತ ತಂಡವು ಅಫ್ಗಾನಿಸ್ತಾನ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2–0ಯಿಂದ ತನ್ನದಾಗಿಸಿಕೊಂಡಿತು.

ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆತಿಥೇಯ ಬಳಗವು 6 ವಿಕೆಟ್‌ಗಳಿಂದ ಜಯಿಸಿತು.

ADVERTISEMENT

ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಬೌಲರ್‌ಗಳ ಪರಿಣಾಮಕಾರಿ ದಾಳಿಯನ್ನು ಎದುರಿಸಿ ನಿಂತ ಗುಲ್ಬದೀನ್ ನೈಬ್ (57; 35ಎ, 4X5, 6X3) ಅರ್ಧಶತಕದ ಬಲದಿಂದ ಅಫ್ಗನ್ ತಂಡವು 20 ಓವರ್‌ಗಳಲ್ಲಿ 172 ರನ್ ಗಳಿಸಿತು. ಆರ್ಷದೀಪ್ ಸಿಂಗ್ ಮೂರು ವಿಕೆಟ್ ಗಳಿಸಿದರು.

ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅಗ್ರಕ್ರಮಾಂಕದ ಇಬ್ಬರು ಬ್ಯಾಟರ್‌ಗಳ ವಿಕೆಟ್‌ಗಳನ್ನು ಗಳಿಸಿದರು.  ಅಫ್ಗನ್ ನಾಯಕ ಇಬ್ರಾಹಿಂ ಝದ್ರಾನ್ (8 ರನ್) ಮತ್ತು ಗುಲ್ಬದೀನ್ ಅವರು ಅಕ್ಷರ್ ಮೋಡಿಗೆ ಶರಣಾದರು.

ಗುರಿ ಬೆನ್ನಟ್ಟಿದ ಭಾರತ ತಂಡವು ಆರಂಭಿಕ ಬ್ಯಾಟರ್ ಯಶಸ್ವಿ (68; 34ಎ, 4X5, 6X6) ಮತ್ತು ಶಿವಂ (ಔಟಾಗದೆ 63, 32ಎ, 4X5, 6X4) ಅವರ ಅಟದ ಬಲದಿಂದ 15.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 173 ರನ್ ಗಳಿಸಿತು.

ಹೋರಾಟದ ಮೊತ್ತ ಸಾಧಿಸುವ ಹಾದಿಯ ಆರಂಭದಲ್ಲಿಯೇ ಭಾರತ ತಂಡವು ಆಘಾತ ಅನುಭವಿಸಿತ್ತು. ಮೊದಲ ಓವರ್‌ನಲ್ಲಿ ಫಜಲ್ ಹಕ್ ಫಾರೂಖಿ ಎಸೆತದ ವೇಗವನ್ನು ಅಂದಾಜಿಸುವಲ್ಲಿ ವಿಫಲರಾದ ನಾಯಕ ರೋಹಿತ್ ಕ್ಲೀನ್‌ಬೌಲ್ಡ್ ಆದರು. ಸತತ ಎರಡನೇ ಪಂದ್ಯದಲ್ಲಿಯೂ ಅವರು ಖಾತೆ ತೆರೆಯಲಿಲ್ಲ.

ವಿರಾಟ್ ಕೊಹ್ಲಿ ಆರಂಭದಿಂದಲೇ ಆಕ್ರಮಣಶೀಲರಾದರು. 16 ಎಸೆತಗಳಲ್ಲಿ 29 ರನ್‌ ಗಳಿಸಿದರು. ಅದರಲ್ಲಿ ಐದು ಬೌಂಡರಿಗಳಿದ್ದವು. ಆರನೇ ಓವರ್‌ನಲ್ಲಿ ನವೀನ್ ಉಲ್ ಹಕ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಕೊಹ್ಲಿ ಅವರು ಇಬ್ರಾಹಿಂಗೆ ಕ್ಯಾಚಿತ್ತರು.

ಇಬ್ಬರೂ ಅನುಭವಿಗಳು ಪೆವಿಲಿಯನ್ ಸೇರಿದಾಗ ಕ್ರೀಸ್‌ನಲ್ಲಿ ಯುವ ಆಟಗಾರ ಯಶಸ್ವಿ ಮಾತ್ರ ಎದೆಗುಂದಲಿಲ್ಲ. ಅವರೊಂದಿಗೆ ಜೊತೆಗೂಡಿದ ಶಿವಂ ಕೂಡ ಬೀಸಾಟ ಆರಂಭಿಸಿದರು. ಮೂರನೇ ಓವರ್‌ನಲ್ಲಿ ಯಶಸ್ವಿಗೆ ಒಂದು ‘ಜೀವದಾನ’ ಸಿಕ್ಕಿತ್ತು. ಅದರ ಲಾಭ ಪಡೆದ ಅವರು ಶಿವಂ ಜೊತೆಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 92 ರನ್‌ ಸೇರಿಸಿದರು. 13ನೇ ಓವರ್‌ನಲ್ಲಿ ಯಶಸ್ವಿ ಔಟಾದರು. 

ಇನಿಂಗ್ಸ್‌ನ ಸಂಪೂರ್ಣ ಹೊಣೆ ಹೊತ್ತುಕೊಂಡ ಶಿವಂ ತಂಡವನ್ನು ಜಯದ ಗಡಿ ಮುಟ್ಟಿಸುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್:

ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 172 (ಗುಲ್ಬದೀನ್ ನೈಬ್ 57, ನಜೀಬುಲ್ಲಾ 23, ಕರೀಂ ಜನತ್ 20, ಮುಜೀಬ್ 21, ಅರ್ಷದೀಪ್ ಸಿಂಗ್ 32ಕ್ಕೆ3, ರವಿ ಬಿಷ್ಣೋಯಿ 39ಕ್ಕೆ2, ಅಕ್ಷರ್ ಪಟೇಲ್ 17ಕ್ಕೆ2)

ಭಾರತ: 15.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 173 (ಯಶಸ್ವಿ ಜೈಸ್ವಾಲ್ 68, ವಿರಾಟ್ ಕೊಹ್ಲಿ 29, ಶಿವಂ ದುಬೆ ಔಟಾಗದೆ 63, ಕರೀಂ ಜನತ್ 13ಕ್ಕೆ2) ಫಲಿತಾಂಶ:ಭಾರತ ತಂಡಕ್ಕೆ 6 ವಿಕೆಟ್‌ಗಳ ಜಯ ಹಾಗೂ 2–0ಯಿಂದ ಸರಣಿ ಮುನ್ನಡೆ. ಪಂದ್ಯಶ್ರೇಷ್ಠ: ಅಕ್ಷರ್ ಪಟೇಲ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.