ಪರ್ತ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಭಾರತ ತಂಡದಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿದೆ.
ತಂಡದಲ್ಲಿ ಇಬ್ಬರು ಹೊಸ ಮುಖಗಳಿದ್ದು, ನಿತೀಶ್ ಕುಮಾರ್ ರೆಡ್ಡಿ ಹಾಗೂ ಹರ್ಷೀತ್ ರಾಣಾ ಪದಾರ್ಪಣೆ ಮಾಡಿದ್ದಾರೆ. ಕನ್ನಡಿಗರಾದ ಕೆ.ಎಲ್. ರಾಹುಲ್ ಹಾಗೂ ದೇವದತ್ತ ಪಡಿಕ್ಕಲ್ ತಂಡದಲ್ಲಿದ್ದಾರೆ. ಧ್ರುವ್ ಜುರೇಲ್ ಅವರಿಗೂ ಅವಕಾಶ ನೀಡಲಾಗಿದೆ.
ಅನುಭವಿ ಆಟಗಾರರಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರನ್ನು ಕೈಬಿಡಲಾಗಿದೆ. ಯುವ ಪ್ರತಿಭಾವಂತ ಆಟಗಾರರಾದ ಸರ್ಫರಾಜ್ ಖಾನ್ ಹಾಗೂ ಆಕಾಶ್ ದೀಪ್ ಅವರಿಗೂ ಅವಕಾಶ ನಿರಾಕರಿಸಲಾಗಿದೆ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಉಸ್ತುವಾರಿ ನಾಯಕ ಜಸ್‌ಪ್ರೀತ್ ಬೂಮ್ರಾ ಮುನ್ನಡೆಸುತ್ತಿದ್ದಾರೆ.
ಕೊಹ್ಲಿ ವೈಫಲ್ಯ; ಜೈಸ್ವಾಲ್, ಪಡಿಕ್ಕಲ್ ಶೂನ್ಯಕ್ಕೆ ಔಟ್...
ಟಾಸ್ ಗೆದ್ದ ಭಾರತ ನಾಯಕ ಜಸ್‌ಪ್ರೀತ್ ಬೂಮ್ರಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಭಾರತದ ಆರಂಭ ಉತ್ತಮವಾಗಿರಲಿಲ್ಲ.
ತಂಡವು 32 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ ಹಾಗೂ ದೇವದತ್ತ ಪಡಿಕ್ಕಲ್ ಶೂನ್ಯಕ್ಕೆ ಔಟ್ ಆದರು.
ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಐದು ರನ್ ಗಳಿಸಿ ನಿರ್ಗಮಿಸಿದರು. ಆ ಮೂಲಕ ಕೊಹ್ಲಿ ಅವರ ಕಳಪೆ ಪ್ರದರ್ಶನ ಮುಂದುವರಿಯಿತು.
ಭಾರತೀಯ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ರಕ್ಷಣಾತ್ಮಕ ಆಟವು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುತ್ತಿದೆ.
ಬ್ಯಾಟ್ ಮೂಲಕ ಮೊದಲ ರನ್ ಇನಿಂಗ್ಸ್‌ನ 24ನೇ ಎಸೆತದಲ್ಲಿ ದಾಖಲಾಯಿತು. ಈ ಹಿಂದೆ 2001ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ಬ್ಯಾಟ್ ಮೂಲಕ ಮೊದಲ ರನ್ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.