ದೆಹಲಿ: ನೇಥನ್ ಲಯನ್ (5 ವಿಕೆಟ್) ಕೈಚಳಕಕ್ಕೆ ಸಿಲುಕಿರುವ ಟೀಮ್ ಇಂಡಿಯಾ, ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ.
ಎರಡನೇ ದಿನದ ಟೀ ವಿರಾಮದ ವೇಳೆಗೆ ಭಾರತ ತಂಡವು 62 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದೆ. ಇನ್ನಿಂಗ್ಸ್ ಮುನ್ನಡೆಗಾಗಿ ಮೂರು ವಿಕೆಟ್ ಬಾಕಿ ಉಳಿದಿರುವಂತೆಯೇ ಇನ್ನೂ 84 ರನ್ ಗಳಿಸಬೇಕಿದೆ.
ಅಕ್ಷರ್ ಪಟೇಲ್ (28*) ಹಾಗೂ ರವಿಚಂದ್ರನ್ ಅಶ್ವಿನ್ (11*) ಕ್ರೀಸಿನಲ್ಲಿದ್ದಾರೆ.
ವಿಕೆಟ್ ನಷ್ಟವಿಲ್ಲದೆ 21 ರನ್‌ನಿಂದ ಎರಡನೇ ದಿನದಾಟ ಮುಂದುವರಿಸಿದ ಭಾರತದ ಓಟಕ್ಕೆ ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನೇಥನ್ ಲಯನ್ ಕಡಿವಾಣ ಹಾಕಿದರು.
ಮೊದಲ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ 46 ರನ್‌ಗಳ ಜೊತೆಯಾಟ ಕಟ್ಟಿದರು.
ಮೊದಲು ರಾಹುಲ್ (17) ಹೊರದಬ್ಬಿದ ಲಯನ್ ಬಳಿಕ, ಒಂದೇ ಓವರ್‌ನಲ್ಲಿ (19ನೇ ಓವರ್) ನಾಯಕ ರೋಹಿತ್ (32) ಹಾಗೂ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಚೇತೇಶ್ವರ ಪೂಜಾರ (0) ಅವರ ವಿಕೆಟ್ ಗಳಿಸಿದರು.
ಈ ಮೂಲಕ ಪೂಜಾರ 100ನೇ ಪಂದ್ಯದಲ್ಲಿ ಶೂನ್ಯ ಸಂಪಾದನೆ ಮಾಡಿದ ಅಪಖ್ಯಾತಿಗೆ ಒಳಗಾದರು.
ಶ್ರೇಯಸ್ ಅಯ್ಯರ್ (4) ಕೂಡ ಲಯನ್ ಬಲೆಗೆ ಬಿದ್ದರು.
ಇನ್ನೊಂದೆಡೆ ವಿರಾಟ್ ಕೊಹ್ಲಿ (44) ದಿಟ್ಟ ಹೋರಾಟ ತೋರಿದರು. ಅವರಿಗೆ ರವೀಂದ್ರ ಜಡೇಜ (26) ಅಲ್ಪ ಹೊತ್ತು ಸಾಥ್ ಕೊಟ್ಟರು. ಇವರಿಬ್ಬರು ಐದನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.
ಶ್ರೀಕರ್ ಭರತ್ (6) ಅವರನ್ನು ಪೆವಿಲಿಯನ್‌ಗೆ ಮರಳಿಸಿದ ಲಯನ್ ಐದು ವಿಕೆಟ್ ಪೂರ್ಣಗೊಳಿಸಿದರು. ಅಲ್ಲದೆ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳ ಸಾಧನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.