ADVERTISEMENT

ಟಿ20 ಕ್ರಿಕೆಟ್: ಆಸ್ಟ್ರೇಲಿಯಾ ಎದುರು ‘ಹ್ಯಾಟ್ರಿಕ್ ಜಯ’ದ ಮೇಲೆ ಭಾರತ ಕಣ್ಣು

ಪಿಟಿಐ
Published 27 ನವೆಂಬರ್ 2023, 19:30 IST
Last Updated 27 ನವೆಂಬರ್ 2023, 19:30 IST
<div class="paragraphs"><p>ಅಭ್ಯಾಸನಿರತ ಆವೇಶ್ ಖಾನ್, ಇಶಾನ್ ಕಿಶನ್ ಮತ್ತು ರಿಂಕು ಸಿಂಗ್&nbsp; </p></div>

ಅಭ್ಯಾಸನಿರತ ಆವೇಶ್ ಖಾನ್, ಇಶಾನ್ ಕಿಶನ್ ಮತ್ತು ರಿಂಕು ಸಿಂಗ್ 

   

–ಪಿಟಿಐ ಚಿತ್ರ

ಗುವಾಹಟಿ: ಮೊದಲೆರಡೂ ಪಂದ್ಯಗಳಲ್ಲಿ  ಭರ್ಜರಿ ಜಯ ಗಳಿಸಿರುವ ಸೂರ್ಯಕುಮಾರ್ ಯಾದವ್ ನಾಯ ಕತ್ವದ ಭಾರತ ತಂಡವು ಮಂಗಳವಾರ ‘ಹ್ಯಾಟ್ರಿಕ್ ಜಯ’ ಸಾಧಿಸಿ, ಆಸ್ಟ್ರೇಲಿಯಾ ಎದುರಿನ ‌ಟಿ20 ಸರಣಿಯನ್ನು ಕೈವಶ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ADVERTISEMENT

ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಅವರು ಭರ್ಜರಿ ಲಯದಲ್ಲಿದ್ದಾರೆ. ಇವರ ಆಟದ ಬಲದಿಂದಲೇ ಎರಡನೇ ಪಂದ್ಯದಲ್ಲಿ ಭಾರತ ತಂಡವು ದೊಡ್ಡ ಮೊತ್ತ ಪೇರಿಸಿತ್ತು.  ಆಸ್ಟ್ರೇಲಿಯಾದ ಬೌಲಿಂಗ್ ಪಡೆಯ ಎಸೆತಗಳನ್ನು ರಿಂಕು ಸಿಂಗ್ ಅವರಂತೂ ಬೀಡುಬೀಸಾಗಿ ಬೌಂಡರಿ ಗೆರೆ ದಾಟಿಸಿದ್ದರು.

ಈ ಬೃಹತ್ ಮೊತ್ತದಿಂದಾಗಿ ಬೌಲ ರ್‌ಗಳಲ್ಲಿ ಆತ್ಮವಿಶ್ವಾಸ ತುಂಬಿ ತುಳುಕಿತ್ತು. ಅದರಿಂದಾಗಿ ಕನ್ನಡಿಗ ಪ್ರಸಿದ್ಧ ಕೃಷ್ಣ, ಆರ್ಷದೀಪ್ ಸಿಂಗ್,  ಮುಕೇಶ್ ಕುಮಾರ್, ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಅವರು ಎದುರಾಳಿ ತಂಡವನ್ನು ಕಟ್ಟಿಹಾಕಿದರು.

ಆದರೆ ಬ್ಯಾಟರ್‌ಗಳು ಒತ್ತಡ ದಿಂದಾಗಿ ಹೆಚ್ಚು ವಿಕೆಟ್ ಕಳೆದುಕೊಂಡಿದ್ದರು ಎನ್ನುವುದೂ ಗಮನಾರ್ಹ. ಅದರಿಂದಾಗಿ ಬೌಲರ್‌ಗಳು ತಮ್ಮ ಸಾಮ ರ್ಥ್ಯಕ್ಕೆ ತಕ್ಕಂತೆ ಉತ್ತಮವಾಗಿ ಬೌಲಿಂಗ್ ಮಾಡುವ ಸವಾಲು ಇದೆ. ಮೂರನೇ ಪಂದ್ಯದಲ್ಲಿ ಬೌಲರ್‌ಗಳು ಸುಧಾರಿತ ಪ್ರದರ್ಶನ ನೀಡುವ ವಿಶ್ವಾಸವಿದೆ.

ಸರಣಿಯ ಮೊದಲ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ಆಸ್ಟ್ರೇಲಿಯಾ ತಂಡವು ಹೋರಾಟ ಮಾಡಿ ಸೋತಿತ್ತು. ಎರಡನೇಯ ಪಂದ್ಯದಲ್ಲಿ ಹೆಚ್ಚು ಪ್ರತಿರೋಧವಿಲ್ಲದೇ ಪಂದ್ಯದಲ್ಲಿ ಪರಾಭವಗೊಂಡಿತು.

ಆದರೆ ಮೂರನೇ ಪಂದ್ಯದಲ್ಲಿ ಗೆದ್ದರೆ ಪ್ರವಾಸಿ ತಂಡಕ್ಕೆ ಸರಣಿ ಗೆಲುವಿನ ಕನಸು ಜೀವಂತವಾಗುಳಿಯುತ್ತದೆ. ಆದ್ದರಿಂದ ತಿರುಗೇಟು ನೀಡುವ ಛಲದಲ್ಲಿ ಮ್ಯಾಥ್ಯೂ ವೇಡ್ ಬಳಗವಿದೆ. ತಂಡದ ಪ್ರಮುಖ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ನೈಜ ಲಯಕ್ಕೆ ಮರಳಿದರೆ ತಂಡಕ್ಕೆ  ಆನೆ ಬಲ ಲಭಿಸುವಲ್ಲಿ ಅನುಮಾನವೇ ಇಲ್ಲ.

ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದ ಹೀರೊ ಟ್ರಾವಿಸ್ ಹೆಡ್ ಈ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ತಂಡದಲ್ಲಿರುವ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಉತ್ತಮ ಲಯ ದಲ್ಲಿದ್ದಾರೆ. ಬ್ಯಾಟರ್ ಜೋಷ್ ಇಂಗ್ಲಿಸ್, ನಾಯಕ ಮ್ಯಾಥ್ಯೂ ವೇಡ್ ಅವರು ಬಿರುಸಾದ ಬ್ಯಾಟಿಂಗ್ ಮಾಡಿದರೆ ತಂಡವು ದೊಡ್ಡ ಮೊತ್ತ ಗಳಿಸಬಹುದು.

ಅಸ್ಸಾಂನ ಗುವಾಹಟಿಯಲ್ಲಿ ಚಳಿಗಾಲದ ಸಂಜೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಬ್ಬನಿ ಸುರಿಯುತ್ತದೆ. ಆದ್ದರಿಂದ ಟಾಸ್ ಗೆಲ್ಲುವ ನಾಯಕ ತೆಗೆದುಕೊಳ್ಳುವ ನಿರ್ಧಾರವೂ ಮುಖ್ಯವಾಗಲಿದೆ.

ಆರಂಭ: ರಾತ್ರಿ 7

ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನೆಮಾ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.