ಇಂದೋರ್: ಮ್ಯಾಥ್ಯೂ ಕುನೇಮನ್ (16ಕ್ಕೆ 5 ವಿಕೆಟ್) ಸೇರಿದಂತೆ ಆಸ್ಟ್ರೇಲಿಯಾದ ಸ್ಪಿನ್ ಬೌಲಿಂಗ್‌ಗೆ ತತ್ತರಿಸಿರುವ ಭಾರತ ತಂಡವು, ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ 33.2 ಓವರ್‌ಗಳಲ್ಲಿ 109 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಜೀವನಶ್ರೇಷ್ಠ ಸಾಧನೆ ಮಾಡಿದ ಕುನೇಮನ್ 16 ರನ್ ತೆತ್ತು ಐದು ವಿಕೆಟ್ ಕಬಳಿಸಿದರು. ನೇಥನ್ ಲಯನ್ ಮೂರು ಮತ್ತು ಟಾಡ್ ಮರ್ಫಿ ಒಂದು ವಿಕೆಟ್ ಗಳಿಸಿದರು.
ಟಾಸ್ ಗೆದ್ದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ರೋಹಿತ್ ಶರ್ಮಾ (12) ಸ್ಟಂಪ್ ಔಟ್ ಆದರು. ಕೆ.ಎಲ್. ರಾಹುಲ್ ಸ್ಥಾನಕ್ಕೆ ಆಯ್ಕೆಯಾಗಿದ್ದ ಶುಭಮನ್ ಗಿಲ್ (21) ಸಹ ನಿರಾಸೆ ಮೂಡಿಸಿದರು.
ಚೇತೇಶ್ವರ ಪೂಜಾರ (1), ರವೀಂದ್ರ ಜಡೇಜ (4) ಹಾಗೂ ಶ್ರೇಯಸ್ ಅಯ್ಯರ್ (0) ಎರಡಂಕಿಯನ್ನು ದಾಟಲಿಲ್ಲ. ಪರಿಣಾಮ 45 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿತು.
ಈ ವೇಳೆ ನಿರೀಕ್ಷೆ ಮೂಡಿಸಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ (22) ಸಹ ಔಟ್ ಆಗುವುದರೊಂದಿಗೆ ಭಾರತಕ್ಕೆ ಬಲವಾದ ಹೊಡೆತ ಬಿತ್ತು. ಊಟದ ವಿರಾಮಕ್ಕೂ ಸ್ವಲ್ಪ ಮೊದಲು ಶ್ರೀಕರ್ ಭರತ್ (17) ಸಹ ಪೆವಿಲಿಯನ್ ಸೇರಿದರು. ಈ ವೇಳೆ ಭಾರತ ಏಳು ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿತ್ತು.
ಇಲ್ಲಿಂದ ಬಳಿಕವೂ ಭಾರತ ಚೇತರಿಸಿಕೊಳ್ಳಲಿಲ್ಲ. ಅಕ್ಷರ್ ಪಟೇಲ್ 12 ರನ್ ಗಳಿಸಿ ಔಟಾಗದೆ ಉಳಿದರು. ರವಿಚಂದ್ರನ್ ಅಶ್ವಿನ್ (3), ಉಮೇಶ್ ಯಾದವ್ (17) ಹಾಗೂ ಮೊಹಮ್ಮದ್ ಸಿರಾಜ್ (0) ನಿರಾಸೆ ಮೂಡಿಸಿದರು.
ರಾಹುಲ್ ಔಟ್, ಶಮಿಗೆ ವಿಶ್ರಾಂತಿ...
ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಎರಡು ಬದಲಾವಣೆ ತರಲಾಗಿತ್ತು. ಕೆ.ಎಲ್. ರಾಹುಲ್ ಅವರನ್ನು ಕೈಬಿಟ್ಟಿದ್ದರೆ ವೇಗಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ಸೂಚಿಸಲಾಗಿತ್ತು.
ಅವರಿಬ್ಬರ ಸ್ಥಾನಗಳಿಗೆ ಅನುಕ್ರಮವಾಗಿ ಶುಭಮನ್ ಗಿಲ್ ಹಾಗೂ ಉಮೇಶ್ ಯಾದವ್ ಆಯ್ಕೆಯಾಗಿದ್ದರು.
ಅತ್ತ ಪ್ಯಾಟ್ ಕಮಿನ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡೆಸುತ್ತಿದ್ದಾರೆ. ಕ್ಯಾಮರೂನ್ ಗ್ರೀನ್, ಮಿಚೆಲ್ ಸ್ಟಾರ್ಕ್ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.