ಇಂದೋರ್: ಭಾರತ ವಿರುದ್ಧ ಇಲ್ಲಿನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 197 ರನ್‌ಗಳಿಗೆ ಆಲೌಟ್ ಆಗಿದೆ.
ಈ ಮೂಲಕ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 88 ರನ್‌ಗಳ ಮುನ್ನಡೆ ಗಳಿಸಿದೆ.
156 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಆಸೀಸ್‌ಗೆ ಇಂದು ಮತ್ತೆ 41 ರನ್ ಪೇರಿಸಲಷ್ಟೇ ಸಾಧ್ಯವಾಯಿತು. ಈ ಪೈಕಿ ಕೊನೆಯ ಆರು ವಿಕೆಟ್‌ಗಳನ್ನು 11 ರನ್ ಅಂತರದಲ್ಲಿ ಕಳೆದುಕೊಂಡಿತು.
ಉಮೇಶ್ ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ಎದುರಾಳಿ ತಂಡದ ಓಟಕ್ಕೆ ಕಡಿವಾಣ ಹಾಕಿದರು. ಕ್ಯಾಮರೂನ್ ಗ್ರೀನ್ (21), ಪೀಟರ್ ಹ್ಯಾಂಡ್ಸ್‌ಕಂಬ್ (19), ಅಲೆಕ್ಸ್ ಕ್ಯಾರಿ (3), ಮಿಚೆಲ್ ಸ್ಟಾರ್ಕ್ (1), ನೇಥನ್ ಲಯನ್ (5), ಟಾಡ್ ಮರ್ಫಿ (0) ನಿರಾಸೆ ಮೂಡಿಸಿದರು.
ಈ ಮೊದಲು ಉಸ್ಮಾನ್ ಖ್ವಾಜಾ ಆಕರ್ಷಕ ಅರ್ಧಶತಕ ಗಳಿಸಿ (60) ಆಸ್ಟ್ರೇಲಿಯಾಕ್ಕೆ ಇನಿಂಗ್ಸ್ ಮುನ್ನಡೆ ಗಳಿಸಲು ನೆರವಾಗಿದ್ದರು.
ಭಾರತದ ಪರ ರವೀಂದ್ರ ಜಡೇಜ ನಾಲ್ಕು ಮತ್ತು ಉಮೇಶ್ ಹಾಗೂ ಅಶ್ವಿನ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.
ಮೊದಲ ದಿನದಾಟದಲ್ಲಿ ಮ್ಯಾಥ್ಯೂ ಕುನೇಮನ್ (16ಕ್ಕೆ 5 ವಿಕೆಟ್) ದಾಳಿಗೆ ತತ್ತರಿಸಿದ್ದ ಭಾರತ 109 ರನ್ನಿಗೆ ಆಲೌಟ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.