ADVERTISEMENT

4ನೇ ಟಿ20 ಪಂದ್ಯ | ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 20 ರನ್ ಜಯ; ಸರಣಿ ವಶ

ಪಿಟಿಐ
Published 1 ಡಿಸೆಂಬರ್ 2023, 17:16 IST
Last Updated 1 ಡಿಸೆಂಬರ್ 2023, 17:16 IST
<div class="paragraphs"><p>ಭಾರತ ತಂಡದ ಆಟಗಾರರ ಸಂಭ್ರಮ</p></div>

ಭಾರತ ತಂಡದ ಆಟಗಾರರ ಸಂಭ್ರಮ

   

ಪಿಟಿಐ ಚಿತ್ರ

ರಾಯಪುರ್: ದೀಪಕ್ ಚಾಹರ್ ಮತ್ತು ಸ್ಪಿನ್ನರ್ ಅಕ್ಷರ್ ಪಟೇಲ್ ಅವರ ಉತ್ತಮ ಬೌಲಿಂಗ್‌ನಿಂದಾಗಿ ಭಾರತ ತಂಡವು ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಟಿ20 ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ADVERTISEMENT

ಶುಕ್ರವಾರ ಇಲ್ಲಿ ನಡೆದ ಹಣಾಹಣಿಯಲ್ಲಿ 20 ರನ್‌ಗಳಿಂದ ಗೆದ್ದ ಭಾರತ ತಂಡವು ಐದು ಪಂದ್ಯಗಳ ಸರಣಿಯನ್ನು  3–1ರಿಂದ ಕೈವಶ ಮಾಡಿಕೊಂಡಿತು.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡವು ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಅವರ ಆಟದ ಬಲದಿಂದ ಆತಿಥೇಯ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 174 ರನ್ ಗಳಿಸಿತು. ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿದಂತೆ ಪ್ರಮುಖ ಆಟಗಾರರ ಗೈರುಹಾಜರಿಯಲ್ಲಿ ಪ್ರವಾಸಿ ಬಳಗವು ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು. 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 154 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಸ್ಪಿನ್ನರ್ ಅಕ್ಷರ್ ಪಟೇಲ್ ಮೂರು ವಿಕೆಟ್ ಗಳಿಸಿದರು. ಸರಣಿಯಲ್ಲಿ ಇದೇ ಮೊದಲ ಪಂದ್ಯ  ಆಡಿದ ದೀಪಕ್ ಚಾಹರ್ ಎರಡು ವಿಕೆಟ್ ಗಳಿಸಿದರು. ಇದರಿಂದಾಗಿ ಆಸ್ಟ್ರೇಲಿಯಾ ತಂಡದಲ್ಲಿ ದೊಡ್ಡ ಜೊತೆಯಾಟಗಳು ಹೊರಹೊಮ್ಮಲಿಲ್ಲ.

ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಬೌಲಿಂಗ್ ವಿಭಾಗವು ಇಲ್ಲಿ ಗೆಲುವಿನ ಕಾಣಿಕೆ ನೀಡಿತು. ಪಂದ್ಯದ ಕೊನೆಯ ಎರಡು ಓವರ್‌ಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಜಯಿಸಲು 40 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲಿ ಮಧ್ಯಮವೇಗಿ ಮುಕೇಶ್ ಕುಮಾರ್ 9 ರನ್‌ ಕೊಟ್ಟರು. ಕೊನೆಯ ಓವರ್‌ನಲ್ಲಿ 31 ರನ್‌ ಹೊಡೆಯುವ ಆಸ್ಟ್ರೇಲಿಯಾದ ಬ್ಯಾಟರ್‌ಗಳ ಪ್ರಯತ್ನಕ್ಕೆ ಆವೇಶ್ ಖಾನ್ ಅಡ್ಡಿಯಾದರು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಮ್ಯಾಥ್ಯೂ ವೇಡ್ ಒಂದು ಸಿಕ್ಸರ್ ಹೊಡೆದರು.

ರಿಂಕು, ಜಿತೇಶ್ ಮಿಂಚು: ಸರಣಿಯಲ್ಲಿ ತಮ್ಮ ಬೀಸಾಟದ ಮೂಲಕ ಗಮನ ಸೆಳೆದಿರುವ ರಿಂಕು ಸಿಂಗ್ ಈ ಪಂದ್ಯದಲ್ಲಿಯೂ ನಿರಾಶೆಗೊಳಿಸಲಿಲ್ಲ.

ಕೇವಲ 29 ಎಸೆತಗಳಲ್ಲಿ 46 ರನ್‌ ಸಿಡಿಸಿದ ಅವರು ತಂಡವು ಗೌರವಾರ್ಹ ಮೊತ್ತ ಗಳಿಸಲು ಕಾರಣರಾದರು. ಅವರು ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಬಾರಿಸಿದರು.  ಅವರೊಂದಿಗೆ ಜಿತೇಶ್ ಶರ್ಮಾ ಕೂಡ ಮಿಂಚಿದರು. 19 ಎಸೆತಗಳಲ್ಲಿ 35 ರನ್‌ ಗಳಿಸಿದರು. ಅವರು ಮೂರು ಸಿಕ್ಸರ್ ಸಿಡಿಸಿದರು. ರಿಂಕು ಮತ್ತು ಋತುರಾಜ್ ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 48 ರನ್‌ ಸೇರಿಸಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ ರಿಂಕು ಮತ್ತು ಜಿತೇಶ್ 56 ರನ್ ಗಳಿಸಿದರು.

ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಮೊದಲ ವಿಕೆಟ್ ಜೊತೆಯಾಟದಲ್ಲಿ 50 ರನ್‌ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ಯಶಸ್ವಿ ಔಟಾದ ನಂತರ ಅನುಭವಿ ಶ್ರೇಯಸ್ ಅಯ್ಯರ್ ಮತ್ತು ನಾಯಕ ಸೂರ್ಯ ಒಂದಂಕಿ ಮಾತ್ರ ಗಳಿಸಿದರು. ಇದರಿಂದಾಗಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಾಗಿತ್ತು. ಅದನ್ನು ರಿಂಕು ದೂರ ಮಾಡಿದರು.

₹ 3.16 ಕೋಟಿ ವಿದ್ಯುತ್ ಬಿಲ್ ಬಾಕಿ

ರಾಯಪುರದ ಶಹೀದ್ ವೀರನಾರಾಯಣ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ₹ 3.16 ಕೋಟಿ ಮೊತ್ತ ವಿದ್ಯುತ್ ಬಿಲ್ ಬಾಕಿ ಇದೆ. ಆದ್ದರಿಂದ ವಿದ್ಯುತ್ ಸರಬರಾಜು ನಿಲ್ಲಿಸಲಾಗಿದೆ.

ಕ್ರೀಡಾಂಗಣದ ಒಡೆತನ ಹೊಂದಿರುವ ರಾಜ್ಯ ಸರ್ಕಾರವು ಬಿಲ್ ಬಾಕಿ ಪಾವತಿಸಿಲ್ಲ. ಆದರೆ ಪ್ರತಿ ಬಾರಿ ಇಲ್ಲಿ ಪಂದ್ಯವಿದ್ದಾಗ ಛತ್ತೀಸಗಢ ರಾಜ್ಯ ವಿದ್ಯುತ್ ಸರಬರಾಜು ಕಂಪೆನಿಯಿಂದ ಛತ್ತೀಸಗಢ ರಾಜ್ಯ ಕ್ರಿಕೆಟ್ ಸಂಘವು (ಸಿಎಸ್‌ಸಿಎಸ್) ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತದೆ.

ಇದರಿಂದಾಗಿ ಶುಕ್ರವಾರ ನಡೆದ ಪಂದ್ಯಕ್ಕೂ ಇದೇ ರೀತಿಯ ಸಂಪರ್ಕ ಪಡೆಯಲಾಗಿತ್ತು.  

‘2010ರಲ್ಲಿಯೇ ಈ ಕ್ರೀಡಾಂಗಣಕ್ಕೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಕ್ರೀಡಾಂಗಣ ನಿರ್ಮಾಣ ಸಮಿತಿಯ ಅನುಮತಿ ಪಡೆದಿತ್ತು. 2018ರಿಂದ  ಇಲ್ಲಿಯವರಿಗೆ ಬಿಲ್ ₹3.16 ಕೋಟಿ ಬಾಕಿಯಾಗಿದೆ’ ಎಂದು ಸಿಎಸ್‌ಪಿಡಿಸಿಎಲ್ ರಾಯಪುರ ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್ ಅಶೋಕ್ ಖಂಡೇಲವಾಲಾ ತಿಳಿಸಿದ್ದಾರೆ.

ಅಗತ್ಯವಿದ್ದಾಗ ತಾತ್ಕಾಲಿಕ ಸಂಪರ್ಕ ಪಡೆಯಲು ಸಂಘವು ₹ 10 ಲಕ್ಷ ಡಿಪಾಸಿಟ್ ನೀಡಿದೆ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.