ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್–ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಭಾರತ ತಂಡವು ಮರುಹೋರಾಟ ನಡೆಸಲು ಕಾರಣರಾದ ನಾಯಕ ಜಸ್‌ಪ್ರೀತ್ ಬೂಮ್ರಾ ಅವರನ್ನು ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಭಾನುವಾರ ಶ್ಲಾಘಿಸಿದ್ದಾರೆ.
1983ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ನಾಯಕ ಕಪಿಲ್ ದೇವ್, ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರೆನಿಸಿದ್ದಾರೆ.
5 ಪಂದ್ಯಗಳ ಸರಣಿಯ ಮೊದಲ ಪಂದ್ಯವು ಪರ್ತ್‌ನಲ್ಲಿ ಶುಕ್ರವಾರ ಆರಂಭವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ, ಕೇವಲ 150 ರನ್‌ಗಳಿಗೆ ಸರ್ವಪತನ ಕಂಡಿತ್ತು. ಬಳಿಕ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಬೂಮ್ರಾ, ಕೇವಲ 30 ರನ್ ನೀಡಿ ಐದು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಹೀಗಾಗಿ, ಭಾರತವು ಮರುಹೋರಾಟ ನಡೆಸಿ ಆತಿಥೇಯರನ್ನು 104ರನ್ ಗಳಿಗೆ ಕಟ್ಟಿಹಾಕಿ, ಇನಿಂಗ್ಸ್ ಮುನ್ನಡೆ ಸಾಧಿಸಲು ಸಾಧ್ಯವಾಯಿತು.
ಈ ಬಗ್ಗೆ 'ವಿಶ್ವ ಸಮುದ್ರ ಗೋಲ್ಡನ್ ಈಗಲ್ ಗಾಲ್ಫ್ ಚಾಂಪಿಯನ್‌ಷಿಪ್' ವೇಳೆ ಮಾತನಾಡಿರುವ ಕಪಿಲ್, 'ಬೂಮ್ರಾ ಅವರಿಗೆ ವಿಶೇಷ ಅಭಿನಂದನೆಗಳು ಸಲ್ಲಬೇಕು. ಏಕೆಂದರೆ, ಬೌಲರ್‌ಗಳನ್ನು ನಾಯಕರನ್ನಾಗಿ ಆಯ್ಕೆ ಮಾಡುವುದೇ ಅಪರೂಪ. ಅವರು ತಂಡವನ್ನು ಮುನ್ನಡೆಸಿದ ರೀತಿಯನ್ನು ನೋಡಲು ಖುಷಿಯಾಗುತ್ತದೆ' ಎಂದು ಹೇಳಿದ್ದಾರೆ.
'ಬೂಮ್ರಾ ಬಗ್ಗೆ ನಾನು ಹೇಳಬೇಕಾದ್ದು ಏನೂ ಇಲ್ಲ. ಅವರ ದಾಖಲೆಗಳೇ ಎಲ್ಲವನ್ನೂ ಹೇಳುತ್ತವೆ. ವಿಶ್ವದ ಅಗ್ರಮಾನ್ಯ ಬೌಲರ್ ಅವರು. ಅದಕ್ಕಿಂತ ಇನ್ನೇನು ಬೇಕು' ಎಂದು ಕೇಳಿದ್ದಾರೆ.
'ಭಾರತದಲ್ಲಿ ವೇಗದ ಬೌಲರ್ ಬಗ್ಗೆ ಈ ಪರಿಯ ಚರ್ಚೆಯಾಗಲಿದೆ ಎಂದು ನಾನೆಂದೂ ಯೋಚಿಸಿರಲಿಲ್ಲ. ಆದರೆ, ಇಂದು ಅದು ನಡೆಯುತ್ತಿದೆ. ಆ ಬಗ್ಗೆ ಸಂತೋಷ ಮತ್ತು ಹೆಮ್ಮೆ ಇದೆ' ಎಂದಿದ್ದಾರೆ.
ಭಾರತದ ಹಿಡಿತದಲ್ಲಿ ಪಂದ್ಯ
ಮೊದಲ ಇನಿಂಗ್ಸ್‌ನಲ್ಲಿ 46 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಬೂಮ್ರಾ ಪಡೆ, ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದೆ.
ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (161 ರನ್), 'ರನ್ ಮಷಿನ್' ಖ್ಯಾತಿಯ ವಿರಾಟ್ ಕೊಹ್ಲಿ (ಅಜೇಯ 100 ರನ್) ಗಳಿಸಿದ ಶತಕಗಳು ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಅವರ ಆಕರ್ಷಕ ಅರ್ಧಶತಕದ (77 ರನ್) ಬಲದಿಂದ 6 ವಿಕೆಟ್‌ಗೆ 487 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಘೋಷಿಸಿದೆ.
534 ರನ್‌ಗಳ ಕಠಿಣ ಗುರಿಯೊಡ್ಡಿದ್ದಷ್ಟೇ ಅಲ್ಲದೆ, 3ನೇ ದಿನದಾಟ ಮುಗಿಯುವುದರೊಳಗೆ ಆತಿಥೇಯ ತಂಡದ ಮೂರು ವಿಕೆಟ್‌ಗಳನ್ನು ಉರುಳಿಸಿ ಪಂದ್ಯದ ಮೇಲೆ ಬಿಗಿಹಿಡಿತ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ್ದ ಬೂಮ್ರಾ ಮತ್ತೆ 2 ವಿಕೆಟ್ ಪಡೆದಿದ್ದಾರೆ. ಮೊಹಮ್ಮದ್ ಸಿರಾಜ್ 1 ವಿಕೆಟ್ ಜೇಬಿಗಿಳಿಸಿದ್ದಾರೆ.
ಇನ್ನೂ ಎರಡು ದಿನಗಳ ಆಟ ಬಾಕಿ ಇದೆ. ಈ ಪಂದ್ಯ ಗೆಲ್ಲಲು ಕಾಂಗರೂ ಪಡೆ ಉಳಿದಿರುವ 7 ವಿಕೆಟ್‌ಗಳಿಂದ 522 ರನ್ ಗಳಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.