ಸಿಡ್ನಿ: ನೆಲಕಚ್ಚಿ ನಿಂತು ಆಡಿ ತಂಡಕ್ಕೆ ಡ್ರಾದ ಕಾಣಿಕೆ ನೀಡಿದ ಹನುಮ ವಿಹಾರಿ ಸೋಮವಾರ ಗಳಿಸಿದ 23 ರನ್‌ಗಳು ಶತಕಕ್ಕೆ ಸಮಾನ ಎಂದು ರವಿಚಂದ್ರನ್ ಅಶ್ವಿನ್ ವಿಶ್ಲೇಷಿಸಿದ್ದಾರೆ. ಕ್ರೀಸ್‌ಗೆ ಬಂದು ಸ್ವಲ್ಪ ಹೊತ್ತಿನಲ್ಲೇ ಪಕ್ಕೆಲುಬಿನ ನೋವಿಗೆ ಒಳಗಾಗಿದ್ದ ವಿಹಾರಿ ವಿಕೆಟ್‌ಗಳ ಮಧ್ಯೆ ಓಡಲು ಸಾಧ್ಯವಾಗದೇ ಸಂಕಟಕ್ಕೆ ಒಳಗಾಗಿದ್ದರು.
‘ಚೇತೇಶ್ವರ್ ಪೂಜಾರ್ ಮತ್ತು ರಿಷಭ್ ಪಂತ್ ಅವರ ವಿಕೆಟ್ ಕಳೆದುಕೊಂಡ ನಂತರ ಜಯ ಗಳಿಸುವ ಆಸೆ ಕೈಬಿಡುವಂತಾಗಿತ್ತು. ಆಸ್ಟ್ರೇಲಿಯಾದ ನೆಲದಲ್ಲಿ ಅಪೂರ್ವ ಇನಿಂಗ್ಸ್ ಆಡಿದ ವಿಹಾರಿ ತಂಡದ ಹೆಮ್ಮೆ ಎನಿಸಿದ್ದಾರೆ. ನೆಟ್ಸ್‌ನಲ್ಲಿ ಮಾಡಿದ ಅಭ್ಯಾಸವೇ ಇಂಥ ಇನಿಂಗ್ಸ್ ಕಟ್ಟಲು ನೆರವಾಯಿತು’ ಎಂದು ಅಶ್ವಿನ್ ಅಭಿಪ್ರಾಯಪಟ್ಟರು.
‘ಟೆಸ್ಟ್ ಕ್ರಿಕೆಟ್ ಡ್ರಾ ಮಾಡಿಕೊಳ್ಳುವುದು ಅಷ್ಟೊಂದು ಸುಲಭವೇನೂ ಅಲ್ಲ. ಆದ್ದರಿಂದ ವಿಹಾರಿ ಜೊತೆ ಆಡಿದ ಕೊನೆಯ ಅವಧಿ ನನಗೆ ರೋಮಾಂಚಕಾರಿಯಾಗಿತ್ತು. ಇದಕ್ಕೂ ಮೊದಲು ಪೂಜಾರ ಬಳಿಗೆ ಹೋಗಿ ನಾನು ‘ಎರಡೂ ಇನಿಂಗ್ಸ್‌ಗಳಲ್ಲಿ ನೀವು ನನ್ನನ್ನು ನದಿ ನೀರಿನಲ್ಲಿ ಹಾಕಿಬಿಟ್ಟಿರಿ ಎಂದು ತಮಾಷೆಗೆ ಹೇಳಿದ್ದೆ’ ಎಂದು ಅಶ್ವಿನ್ ನುಡಿದರು.
‘ಕಮಿನ್ಸ್ ಇಂದು ವಿಶಿಷ್ಟ ರೀತಿಯಲ್ಲಿ ಬೌಲಿಂಗ್ ಮಾಡುತ್ತಿದ್ದರು. ಅವರಿಗೆ ‘ಡಬಲ್ ಬೌನ್ಸರ್’ ಅನುಕೂಲ ಸಿಗುತ್ತಿತ್ತು ಎಂದೆನಿಸುತ್ತಿತ್ತು. ಆದ್ದರಿಂದ ಅವರ ವಿರುದ್ಧ ಬ್ಯಾಟಿಂಗ್ ಮಾಡುವುದು ಸವಾಲೇ ಆಗಿತ್ತು’ ಎಂದು ಅಶ್ವಿನ್ ಹೇಳಿದರು.
ಪಂದ್ಯದ ನಂತರ ಟ್ವೀಟ್ ಮಾಡಿರುವ ಅಶ್ವಿನ್ ಅವರ ಪತ್ನಿ ಪ್ರೀತಿ ‘ಅಶ್ವಿನ್ ನಿನ್ನೆ ರಾತ್ರಿ ವಿಪರೀತ ಬೆನ್ನುನೋವಿನಿಂದ ಬಳಲುತ್ತಿದ್ದರು. ಬೆಳಿಗ್ಗೆ ನೇರವಾಗಿ ಏಳಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಬಗ್ಗಿ ಶೂಗಳ ಲೇಸ್ ಕಟ್ಟುವುದಕ್ಕೂ ಆಗುತ್ತಿರಲಿಲ್ಲ. ಆದರೆ ಕ್ರೀಸ್‌ನಲ್ಲಿ ಅಷ್ಟು ಹೊತ್ತು ಇದ್ದು ಹೇಗೆ ಆಡಿದರು ಎಂಬುದು ನನಗಿನ್ನೂ ಗೊತ್ತಾಗುತ್ತಿಲ್ಲ’ ಎಂದು ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.