ADVERTISEMENT

IND Vs AUS | ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಸೋಲುಣಿಸಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2023, 16:24 IST
Last Updated 22 ಸೆಪ್ಟೆಂಬರ್ 2023, 16:24 IST
   

ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು.

ಆಸ್ಟ್ರೇಲಿಯಾ ನೀಡಿದ 277 ಗುರಿ ಬೆನ್ನತ್ತಿದ್ದ ಭಾರತ ತಂಡವು, 48.4 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು.

ಇಲ್ಲಿನ ಪಂಜಾಬ್‌ ಕ್ರಿಕೆಟ್ ಎಸೋಸಿಯೇಶನ್‌ ಮೈದಾನದಲ್ಲಿ ಟಾಸ್‌ ಗೆದ್ದ ಭಾರತ ತಂಡವು ಆಸ್ಟ್ರೇಲಿಯಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭಿಕ ಮಿಚೆಲ್ ಮಾರ್ಷ್ ಮೊದಲ ಓವರ್‌ನಲ್ಲೇ ಮೊಹಮ್ಮದ್ ಶಮಿಗೆ ವಿಕೆಟ್‌ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ಡೇವಿಡ್‌ ವಾರ್ನರ್‌ ಹಾಗೂ ಸ್ಟೀವ್‌ ಸ್ಮಿತ್‌ 94 ರನ್‌ಗಳ ಜತೆಯಾಟ ಆಡಿದರು.

ADVERTISEMENT

ವಾರ್ನರ್‌ 52 ರನ್‌ ಗಳಿಸಿ ರವೀಂದ್ರ ಜಡೇಜಗೆ ವಿಕೆಟ್‌ ಒಪ್ಪಿಸಿದರು. ಶಮಿ ಬೌಲಿಂಗ್‌ಗೆ ವಿಕೆಟ್‌ ಕಳೆದುಕೊಳ್ಳುವ ಮುನ್ನ ಸ್ಟೀವ್‌ ಸ್ಮಿತ್ 41 ರನ್‌ ಗಳಿಸಿದ್ದರು.

ಲಾಬೂಷೇನ್ 39 , ಗ್ರೀನ್‌ 31, ಇಂಗ್ಲಿಸ್‌ 45, ಸ್ಟೋಯಿನಿಸ್‌ 21, ನಾಯಕ ಕಮಿನ್ಸ್‌ 21 ರನ್‌ ಗಳಿಸಿದರು. ಶಾರ್ಟ್‌, ಅಬಾಟ್ ಹಾಗೂ ಜಂಪಾ ತಲಾ 2 ರನ್‌ ಗಳಿಸಿದರು.

ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 276 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾರತದ ಪರ ಐದು ವಿಕೆಟ್ ಕಬಳಿಸಿ ಮೊಹಮ್ಮದ್ ಶಮಿ ಮಿಂಚಿದರು. ಜಸ್‌ಪ್ರೀತ್ ಬೂಮ್ರಾ, ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಕಬಳಿಸಿದರು.

277ರನ್‌ಗಳ ಈ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಲಭಿಸಿತು. ಋತುರಾಜ್ ಗಾಯಕ್ವಾಡ್‌ ಹಾಗೂ ಶುಭಮನ್ ಗಿಲ್‌ ಮೊದಲ ವಿಕೆಟ್‌ಗೆ 142 ರನ್‌ ಸೇರಿಸಿ ಉತ್ತಮ ಆಡಿಪಾಯ ಹಾಕಿಕೊಟ್ಟರು. ಈ ಇಬ್ಬರು 71 ಹಾಗೂ 74 ರನ್‌ ಗಳಿಸಿ ಆ್ಯಡಂ ಜಂಪಾಗೆ ವಿಕೆಟ್‌ ಒಪ್ಪಿಸಿದರು.

ಹಲವು ತಿಂಗಳ ನಂತರ ತಂಡಕ್ಕೆ ಮರಳಿದ ಶ್ರೇಯಸ್‌ ಆಯ್ಯರ್‌ 3 ರನ್‌ ಗಳಿಸಿದ್ದಾಗ ರನೌಟ್‌ ಆದರು.

ಇಶಾನ್ ಕಿಶನ್‌ 18 ರನ್‌ ಗಳಿಸಿ ನಾಯಕ ಕಮಿನ್ಸ್‌ಗೆ ಔಟ್‌ ಆದರು.

ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ನಾಯಕ ಕೆ.ಎಲ್‌ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧ ಶತಕ ಬಾರಿಸಿದರು.

ಸೂರ್ಯಕುಮಾರ್‌ ಯಾದವ್‌ 50 ರನ್‌ ಗಳಿಸಿ ಔಟಾದರೆ, ರಾಹುಲ್ 58 ರನ್‌ ಕಲೆ ಹಾಕಿದರು. ಸಿಕ್ಸರ್‌ ಸಿಡಿಸಿ ರಾಹುಲ್ ಅವರು ತಂಡಕ್ಕೆ ಜಯ ತಂದುಕೊಟ್ಟರು. 3 ರನ್ ಗಳಿಸಿ ಜಡೇಜ ಅಜೇಯರಾಗಿ ಉಳಿದರು.

ಆಸ್ಟ್ರೇಲಿಯಾ ಪರ ಜಂಪಾ 2 ಹಾಗೂ ಕಮಿನ್ಸ್‌ ಮತ್ತು ಅಬಾಟ್‌ ತಲಾ ಒಂದು ವಿಕೆಟ್‌ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.