ಮೆಲ್ಬರ್ನ್: ವರ್ಷಾರಂಭದಲ್ಲೇ ತಮ್ಮದೇ ನೆಲದಲ್ಲಿ ಎದುರಾದ ಹೀನಾಯ ಟೆಸ್ಟ್ ಸರಣಿ ಸೋಲಿಗೆ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಭಾರತೀಯ ಆಟಗಾರರು ಅಪ್ರಸ್ತುತ ವಿಷಯಗಳಿಂದ ತಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದರು. ಇದರಿಂದಾಗಿ ನಾವು ವಿಚಲಿತರಾದೆವು ಎಂದು ಆರೋಪಿಸಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಯುವ ತಂಡವನ್ನು ಕಟ್ಟಿಕೊಂಡಿದ್ದ ವಿರಾಟ್ ಕೊಹ್ಲಿ ಬಳಗವು, ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು 2-1ರ ಅಂತರದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿತ್ತು. ಈ ಮೂಲಕ ಸತತ ಎರಡನೇ ಬಾರಿಗೆ ಆಸೀಸ್ ನಲೆದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿತ್ತು.
ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ 36 ರನ್ನಿಗೆ ಆಲೌಟ್ ಆಗಿ ಮುಖಭಂಗಕ್ಕೊಳಗಾಗಿದ್ದಟೀಮ್ ಇಂಡಿಯಾ ಅಲ್ಲಿಂದ ಬಳಿಕ ಪುಟಿದೆದ್ದು, ಕಾಂಗರೂ ಪಡೆಯ ಮೇಲೆ ಸವಾರಿ ಮಾಡಿತ್ತು.
ಅಪ್ರಸ್ತುತ ವಿಷಯಗಳಿಂದ ಅವರು ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿದ್ದರು. ಇದರಿಂದ ನಾವು ವಿಚಲಿತರಾಗಿದ್ದ ಸಂದರ್ಭಗಳು ಎದುರಾಗಿತ್ತು. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಅವರು ಗಾಬಾಗೆ ಹೋಗುತ್ತಿಲ್ಲ ಎಂದಾಗ ಮುಂದಿನ ಟೆಸ್ಟ್ ಎಲ್ಲಿ ನಡೆಯುತ್ತದೆ ಎಂಬುದು ನಮಗೂ ತಿಳಿದಿರಲಿಲ್ಲ. ಅವರು ಆಟದ ಹೊರತಾಗಿ ಇಂತಹ ಸೈಡ್ ಶೋಗಳನ್ನು ಸೃಷ್ಟಿಸುವಲ್ಲಿ ನಿಪುಣರಾಗಿದ್ದಾರೆ. ಇದರಿಂದ ಚೆಂಡಿನ ಮೇಲಿನ ನಮ್ಮ ಗಮನವು ಬೇರೆಡೆಗೆಸರಿದಿತ್ತು ಎಂದು ಟೀಕಿಸಿದ್ದಾರೆ.
ಬಿಗುವಾದ ಕ್ವಾರಂಟೈನ್ ನಿಯಮಗಳು ಹೇರಿಕೆಯಾದ್ದಲ್ಲಿ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಆಡಲು ಭಾರತೀಯ ಆಟಗಾರರು ಬಯಸಿರಲಿಲ್ಲ ಎಂಬ ವರದಿಯನ್ನು ಉಲ್ಲೇಖಿಸಿ ಟಿಮ್ ಪೇನ್ ಆರೋಪ ಮಾಡಿದ್ದಾರೆ.
ಬಳಿಕ ನಡೆದಿದ್ದೇ ಇತಿಹಾಸ. ಗಾಬಾದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ರಿಷಭ್ ಪಂತ್ ಅದ್ಭುತ ಆಟದ ನೆರವಿನಿಂದ ದಾಖಲೆಯ 328 ರನ್ ಗುರಿ ಬೆನ್ನತ್ತಿದ ಭಾರತ, ಇನ್ನು 19 ಎಸೆತಗಳು ಮಾತ್ರ ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿತ್ತು. ಈ ಮೂಲಕ ಆಸೀಸ್ ನಾಡಲ್ಲಿ ಇತಿಹಾಸ ರಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.