ADVERTISEMENT

ಕ್ರಿಕೆಟ್‌ | ಭಾರತ ಪ್ರವಾಸದಿಂದ ಹಿಂದೆ ಸರಿದ ಆಸಿಸ್ ಮುಖ್ಯ ಕೋಚ್‌ ಲ್ಯಾಂಗರ್‌

ಏಕದಿನ ಸರಣಿ

ಪಿಟಿಐ
Published 7 ಜನವರಿ 2020, 14:25 IST
Last Updated 7 ಜನವರಿ 2020, 14:25 IST
ಜಸ್ಟಿನ್‌ ಲ್ಯಾಂಗರ್‌
ಜಸ್ಟಿನ್‌ ಲ್ಯಾಂಗರ್‌   

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಅವರು ಭಾರತ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.

ಅವರ ಅನುಪಸ್ಥಿತಿಯಲ್ಲಿ ಸಹಾಯಕ ಕೋಚ್‌ ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್‌ ಅವರು ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಮೊದಲ ಪಂದ್ಯ ಇದೇ ತಿಂಗಳ 14ರಂದು ನಿಗದಿಯಾಗಿದೆ.

ADVERTISEMENT

‘ಭಾರತ ಪ್ರವಾಸದಿಂದ ಹಿಂದೆ ಸರಿದಿರುವುದಾಗಿ ಮೆಕ್‌ಡೊನಾಲ್ಡ್‌ಗೆ ತಿಳಿಸಿದ್ದೇನೆ. ಅವರು ತಂಡಕ್ಕೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ. ಭಾರತದ ವಿರುದ್ಧ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿದೆ’ ಎಂದು ಲ್ಯಾಂಗರ್‌ ಹೇಳಿದ್ದಾರೆ.

ಹೊಸ ಸವಾಲು: ‘ಭಾರತ ತಂಡ ಬಲಿಷ್ಠವಾಗಿದೆ.‌ ಆತಂಡವನ್ನು ಅದರದ್ದೇ ನೆಲದಲ್ಲಿ ಮಣಿಸುವುದು ಸುಲಭವಲ್ಲ. ವಿರಾಟ್‌ ಕೊಹ್ಲಿ ಬಳಗದಲ್ಲಿ ವಿಶ್ವಶ್ರೇಷ್ಠ ಬೌಲರ್‌ ಮತ್ತು ಬ್ಯಾಟ್ಸ್‌ಮನ್‌ಗಳಿದ್ದಾರೆ. ಹೀಗಾಗಿ ಭಾರತದ ವಿರುದ್ಧದ ಸರಣಿ ನನ್ನ ಪಾಲಿಗೆ ಸವಾಲಿನದ್ದಾಗಲಿದೆ’ ಎಂದು ಆಸ್ಟ್ರೇಲಿಯಾ ತಂಡದ ಯುವ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಾಬುಶೇನ್‌ ತಿಳಿಸಿದ್ದಾರೆ.

‘ವಿರಾಟ್‌ ಕೊಹ್ಲಿ, ಕೇನ್‌ ವಿಲಿಯಮ್ಸನ್‌ ಮತ್ತು ಸ್ಟೀವ್‌ ಸ್ಮಿತ್‌ ಅವರು ಹಿಂದಿನ ಆರು, ಏಳು ವರ್ಷಗಳಿಂದಲೂ ಸ್ಥಿರ ಸಾಮರ್ಥ್ಯ ತೋರುತ್ತಾ ಬಂದಿದ್ದಾರೆ. ಹೀಗಾಗಿ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳೆನಿಸಿದ್ದಾರೆ. ಈ ಋತುವಿನಲ್ಲಿ ಅಮೋಘವಾಗಿ ಆಡಿದಾಕ್ಷಣ ನಾನು ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿಬಿಡುವುದಿಲ್ಲ. ಮುಂಬರುವ ಟೂರ್ನಿಗಳಲ್ಲೂ ಸ್ಥಿರ ಸಾಮರ್ಥ್ಯ ತೋರಿ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಬೇಕಾದ ಸವಾಲು ಎದುರಿಗಿದೆ. ಅದನ್ನು ಮೀರಿನಿಲ್ಲಬೇಕು’ ಎಂದಿದ್ದಾರೆ.

‘ಭಾರತದ ವಿರುದ್ಧದ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕರೆ ತುಂಬಾ ಸಂತಸವಾಗುತ್ತದೆ. ಸರಣಿಯ ವೇಳೆ ಆ್ಯರನ್‌ ಫಿಂಚ್‌, ಡೇವಿಡ್‌ ವಾರ್ನರ್‌ ಮತ್ತು ಸ್ಟೀವ್‌ ಸ್ಮಿತ್‌ ಅವರಿಂದ ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸುತ್ತೇನೆ’ ಎಂದೂ ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.