ಅಡಿಲೇಡ್: ಗಾಯದ ಆತಂಕಕ್ಕೊಳಗಾಗಿರುವ ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ, ಸರಣಿಯಲ್ಲಿ ಉಳಿದಿರುವಪಂದ್ಯಗಳಿಗೆ ಲಭ್ಯರಾಗುವುದು ಅನುಮಾನವೆನಿಸಿದೆ.
ಇದು ಭಾರತ ತಂಡದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಡಿಲೇಡ್‌ನಲ್ಲಿ ಓವಲ್‌ನಲ್ಲಿ ಶನಿವಾರ ಅಂತ್ಯಗೊಂಡ ಮೊದಲ ಹೊನಲು-ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಮೊಹಮ್ಮದ್ ಶಮಿ ಮುಂಗೈಗೆ ಗಾಯ ಮಾಡಿಕೊಂಡಿದ್ದರು.
ಪ್ಯಾಟ್ ಕಮಿನ್ಸ್ ಎಸೆದ ಶಾರ್ಟ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾಗಿದ್ದ ಮೊಹಮ್ಮದ್ ಶಮಿ ಮುಂಗೈಗೆ ಗಾಯ ಮಾಡಿಕೊಂಡರು. ಅಲ್ಲದೆ ಬ್ಯಾಟಿಂಗ್ ಮುಂದುವರಿಸಲಾಗದೇ ನಿವೃತ್ತಿ ಹೊಂದಿದರು.
ಇದರೊಂದಿಗೆ ಭಾರತ 36 ರನ್ನಿಗೆ ಆಲೌಟ್ ಆಗುವುದರೊಂದಿಗೆ, ತನ್ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ಕನಿಷ್ಠ ರನ್ನಿಗೆ ಪತನಗೊಂಡಿತ್ತು.
ಈಬಗ್ಗೆ ಮಾಹಿತಿ ಕೊಟ್ಟಿರುವ ಬಿಸಿಸಿಐ ಮೂಲಗಳು, ಆಸ್ಪತ್ರೆಯಲ್ಲಿ ನಡೆಸಿದ ಸ್ಕ್ಯಾನಿಂಗ್‌ನಲ್ಲಿ ಮೊಹಮ್ಮದ್ ಶಮಿ ಮುಂಗೈಯಲ್ಲಿ ಫ್ರಾಕ್ಚರ್ ಕಂಡುಬಂದಿದ್ದು, ಸರಣಿಯ ಉಳಿದಿರುವ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನವೆನಸಿದೆ ಎಂದಿದೆ.
ಆಗಲೇ ಗಾಯದಿಂದಾಗಿ ಇಶಾಂತ್ ಶರ್ಮಾ ಸೇವೆಯಿಂದ ವಂಚಿತವಾಗಿರುವ ಟೀಮ್ ಇಂಡಿಯಾ, ಈಗ ಮೊಹಮ್ಮದ್ ಶಮಿ ಅವರನ್ನು ಕಳೆದುಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದೀಗ ಮೊಹಮ್ಮದ್ ಶಮಿ ಸ್ಥಾನವನ್ನು ಯುವ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತುಂಬುವ ಸಾಧ್ಯತೆಯಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಕೂಡಾ ಪಿತೃತ್ವ ರಜೆಯಲ್ಲಿ ತಾಯ್ನಾಡಿಗೆ ಮರಳಲಿದ್ದಾರೆ. ಇವೆಲ್ಲವೂ ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯಾಗಿದೆ.
ಇದನ್ನೂ ಓದಿ:ವಿರಾಟ್ ಬಳಗದ ಕಣ್ಣು ಕುಕ್ಕಿದ ಪಿಂಕ್ ಬಾಲ್ ಹೊಳಪು!
ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ಬಾರಿಸಿರುವ ಆಸ್ಟ್ರೇಲಿಯಾ, 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಡಿ.26ರಂದು ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.