ಮುಂಬೈ: 'ಸಾಕು ನಾಯಿ ಕಡಿತದಿಂದ ಗಂಭೀರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. 50 ಹೊಲಿಗೆ ಹಾಕಿಸಿಕೊಳ್ಳಬೇಕಾಯಿತು' ಎಂದು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಅಲಿಸಾ ಹೀಲಿ ಬುಧವಾರ ಹೇಳಿಕೊಂಡಿದ್ದಾರೆ.
ಘಟನೆ ನಡೆದು ಬಹುತೇಕ ಎರಡು ತಿಂಗಳು ಕಳೆದಿವೆ. ಇದೀಗ ಮೈದಾನಕ್ಕೆ ಮರಳಲು ಉತ್ಸುಕಳಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಹೀಲಿ ಅವರು, ಆಸಿಸ್ ತಂಡದ ನಾಯಕತ್ವದ ಜೊತೆಗೆ ವಿಕೆಟ್‌ಕೀಪರ್ ಹೊಣೆಯನ್ನೂ ನಿಭಾಯಿಸುತ್ತಾರೆ. ಅವರು ತಮ್ಮ ಮನೆಯಲ್ಲಿರುವ ಸ್ಟಫೊರ್ಡ್‌ಶೈರ್ ಟೆರ್ರೀರ್ ತಳಿಯ ಶ್ವಾನದಿಂದ ಕಚ್ಚಿಸಿಕೊಂಡಿದ್ದರು.
ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳು ನಾಳೆ (ಡಿಸೆಂಬರ್ 21ರಂದು) ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹೀಲಿ, ಬಲಗೈ ತೋರು ಬೆರಳಿಗೆ ಗಂಭೀರ ಗಾಯವಾಗಿತ್ತು ಎಂದು ತಿಳಿಸಿದ್ದಾರೆ.
'ಸದ್ಯ ನೋವೇನು ಇಲ್ಲ. ಆಟಕ್ಕೆ ಮರಳಿರುವುದರಿಂದ ಸಂತಸವಾಗಿದೆ. ಮನೆಯಲ್ಲಿ ಕುಳಿತು ಮಹಿಳೆಯರ ಬಿಗ್ ಬಾಷ್ ಲೀಗ್ ನೋಡುವುದಕ್ಕೂ ಮೊದಲು, ಆಟವನ್ನು ಇಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂದುಕೊಂಡಿರಲಿಲ್ಲ' ಎಂದಿದ್ದಾರೆ. ಗಾಯಗೊಳ್ಳುವುದಕ್ಕೂ ಮುನ್ನ ಅವರು 2023ರ ಬಿಗ್ ಬಾಷ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ಪರ ಉದ್ಘಾಟನಾ ಪಂದ್ಯದಲ್ಲಿ ಆಡಿದ್ದರು.
ಆಸ್ಟ್ರೇಲಿಯಾ ಮಹಿಳಾ ತಂಡದ ಯಶಸ್ವಿ ನಾಯಕಿ ಎನಿಸಿದ್ದ ಮೆಗ್ ಲ್ಯಾನಿಂಗ್ ವಿದಾಯದ ಬಳಿಕ ತಂಡದ ಹೊಣೆ ಹೊತ್ತಿರುವ ಹೀಲಿ, 'ಬೆರಳಿನ ಗಾಯ ವಾಸಿಯಾಗಿದೆ. ನಾಳಿನ ಪಂದ್ಯದಲ್ಲಿ ಗ್ಲೌ ಧರಿಸುತ್ತೇನೆ. ಅದಕ್ಕಾಗಿ ಉತ್ಸುಕಳಾಗಿದ್ದೇನೆ' ಎಂದು ತಿಳಿಸಿದ್ದಾರೆ.
ಹೀಲಿ ಅವರು ಇಂಗ್ಲೆಂಡ್ ವಿರುದ್ಧ ಇದೇ ವರ್ಷ ಜೂನ್‌ನಲ್ಲಿ ನಡೆದಿದ್ದ ಏಕೈಕ ಆ್ಯಷಸ್ ಟೆಸ್ಟ್‌ನಲ್ಲಿ ತಂಡ ಮುನ್ನಡೆಸಿದ್ದರು. ಆಸಿಸ್ ಆ ಪಂದ್ಯದಲ್ಲಿ 89 ರನ್‌ಗಳ ಜಯ ಸಾಧಿಸಿತ್ತು.
ಹೀಲಿ ಸಾಧನೆ
ಏಕದಿನ: 101 ಪಂದ್ಯಗಳ 89 ಇನಿಂಗ್ಸ್‌ಗಳಲ್ಲಿ 5 ಶತಕ ಹಾಗೂ 15 ಅರ್ಧಶತಕ ಸಹಿತ 2,761 ರನ್
ಟೆಸ್ಟ್: 7 ಪಂದ್ಯಗಳ 12 ಇನಿಂಗ್ಸ್‌ಗಳಲ್ಲಿ 2 ಅರ್ಧಶತಕ ಸಹಿತ 286 ರನ್
ಟಿ20: 147 ಪಂದ್ಯಗಳ 129 ಇನಿಂಗ್ಸ್‌ಗಳಲ್ಲಿ 1 ಶತಕ ಹಾಗೂ 15 ಅರ್ಧಶತಕ ಸಹಿತ 2,621 ರನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.