ADVERTISEMENT

Perth Test: ಪರ್ತ್‌ ಮೈದಾನದಲ್ಲಿ 161 ರನ್ ಗಳಿಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2024, 9:01 IST
Last Updated 24 ನವೆಂಬರ್ 2024, 9:01 IST
<div class="paragraphs"><p>ಯಶಸ್ವಿ ಜೈಸ್ವಾಲ್</p></div>

ಯಶಸ್ವಿ ಜೈಸ್ವಾಲ್

   

(ಚಿತ್ರ ಕೃಪೆ: X/@BCCI)

ಪರ್ತ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಶತಕದ ಸಾಧನೆ ಮಾಡಿದ್ದಾರೆ.

ADVERTISEMENT

ಆ ಮೂಲಕ ಆಸ್ಟ್ರೇಲಿಯಾದ ನೆಲದಲ್ಲಿ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಗಳಿಸಿದ ಗೌರವಕ್ಕೆ ಭಾಜನರಾಗಿದ್ದಾರೆ. ಇದರೊಂದಿಗೆ ದಿಗ್ಗಜ ಸುನಿಲ್ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಅಲ್ಲದೆ ತಾವು ಗಳಿಸಿದ ಮೊದಲ ನಾಲ್ಕು ಶತಕಗಳಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಎರಡನೇ ಬ್ಯಾಟರ್ ಎನಿಸಿದ್ದಾರೆ. ಈ ಪಟ್ಟಿಯಲ್ಲಿರುವ ಮಗದೋರ್ವ ಆಟಗಾರ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ರೇಮ್ ಸ್ಮಿತ್ ಆಗಿದ್ದಾರೆ.

ಇನ್ನು ಒಂದೇ ವರ್ಷದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಸಲ 150ಕ್ಕೂ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್‌ಗಳಾದ ಸಚಿನ್ ತೆಂಡೂಲ್ಕರ್ (2002, 2004), ವೀರೇಂದ್ರ ಸೆಹ್ವಾಗ್ (2004, 2008) ಮತ್ತು ವಿರಾಟ್ ಕೊಹ್ಲಿ (2016, 2017) ಸಾಲಿನಲ್ಲಿ ಜೈಸ್ವಾಲ್ ಗುರುತಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಯಶಸ್ವಿ, ಮೂರನೇ ದಿನದಾಟದಲ್ಲಿ ಶತಕ ಗಳಿಸಿದರು. 297 ಎಸೆತಗಳಲ್ಲಿ 161 ರನ್ ಗಳಿಸಿ ಔಟ್ ಆದರು. ಅವರ ಆಕರ್ಷಕ ಇನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು.

ಅಲ್ಲದೆ ಕೆ.ಎಲ್.ರಾಹುಲ್ ಜೊತೆಗೆ ಮೊದಲ ವಿಕೆಟ್‌ಗೆ ದ್ವಿಶತಕದ (201) ಜೊತೆಯಾಟದಲ್ಲಿ ಭಾಗಿಯಾದರು. ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ವಿಕೆಟ್‌ಗೆ ಭಾರತ ಗಳಿಸಿದ ಗರಿಷ್ಠ ಜೊತೆಯಾಟ ಇದಾಗಿದೆ. 1986ರಲ್ಲಿ ಸುನಿಲ್ ಗವಾಸ್ಕರ್ ಹಾಗೂ ಕ್ರಿಸ್ ಶ್ರೀಕಾಂತ್ ಮೊದಲ ವಿಕೆಟ್‌ಗೆ 191 ರನ್ ಪೇರಿಸಿದ್ದರು.

ಪ್ರಸಕ್ತ ಸಾಲಿನಲ್ಲಿ ಈವರೆಗೆ 35 ಸಿಕ್ಸರ್‌ಗಳನ್ನು ಗಳಿಸಿರುವ ಜೈಸ್ವಾಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.