ಸಿಡ್ನಿ: ಇಲ್ಲಿಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ತಮ್ಮನ್ನು ಕೆಣಕಲು ಬಂದ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್‌ಗೆ ಭಾರತೀಯ ಆಟಗಾರ ರವಿಚಂದ್ರನ್ ಅಶ್ವಿನ್ ತಕ್ಕ ಶಾಸ್ತಿ ಮಾಡಿರುವ ಘಟನೆ ವರದಿಯಾಗಿದೆ.
ಅಂತಿಮ ದಿನದಾಟದಲ್ಲಿ ಭಾರತೀಯ ಆಟಗಾರರ ಮನೋಬಲವನ್ನು ಕುಗ್ಗಿಸಲು ಆಸೀಸ್ ಆಟಗಾರರು ಹರಸಾಹಸಪಟ್ಟರು. ಆಗಲೇ ಜನಾಂಗೀಯ ನಿಂದನೆಯನ್ನು ಎದುರಿಸಿರುವ ಭಾರತೀಯ ತಂಡದ ಮನೋಸ್ಥೈರ್ಯವನ್ನು ಕೆಡಿಸುವ ಪ್ರಯತ್ನ ಮಾಡಲಾಯಿತು.
ಅಂತಿಮ ದಿನದಾಟದಲ್ಲಿ ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಪಂದ್ಯ ಡ್ರಾಗೊಳಿಸಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಆಟಗಾರರ ಏಕಾಗ್ರತೆಗೆ ಭಂಗ ತರಲು ಪ್ರಯತ್ನಿಸಿದ ಆಸೀಸ್ ಆಟಗಾರರು ಸ್ಲೆಡ್ಜಿಂಗ್ ಮಾಡಲು ಪ್ರಾರಂಭಿಸಿದರು. ಇದನ್ನು ಲೆಕ್ಕಿಸದ ಅಶ್ವಿನ್ ಅದೇ ಧಾಟಿಯಲ್ಲಿ ಆಸೀಸ್ ಆಟಗಾರರಿಗೆ ಪ್ರತ್ಯುತ್ತರ ನೀಡಿದರು.
ಐದನೇ ದಿನದಾಟದ ಟೀ ವಿರಾಮದ ಬಳಿಕ ಕೊನೆಯ ಅವಧಿಯಲ್ಲಿ ಟಿಮ್ ಪೇನ್ ಹಾಗೂ ಅಶ್ವಿನ್ ನಡುವೆ ಜಟಾಪಟಿ ನಡೆಯಿತು. ಇಬ್ಬರಿಬ್ಬರ ನಡುವಣ ಸಂಭಾಷಣೆಯು ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದೆ.
'ನಿಮ್ಮನ್ನು ಗಾಬಾಕ್ಕೆ ಕರೆದೊಯ್ಯಲು ಕಾಯಲು ಸಾಧ್ಯವಿಲ್ಲ' ಎಂದು ಕಠಿಣ ಕ್ವಾರೈಂಟನ್ ನಿಯಮಗಳಿಂದಾಗಿ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಬ್ರಿಸ್ಬೇನ್‌ಗೆ ತೆರಳಲು ಭಾರತ ತಂಡ ಹಿಂಜರಿಯುತ್ತಿದೆ ಎಂಬುದನ್ನು ಉಲ್ಲೇಖಿಸಿ ಅಶ್ವಿನ್‌ಗೆ ಟಿಮ್ ಪೇನ್ ಕೆಣಕಲು ಪ್ರಯತ್ನಿಸಿದರು.
ಇದಕ್ಕೆ ತಕ್ಷಣ ಪ್ರತ್ಯುತ್ತರ ನೀಡಿದ ಅಶ್ವಿನ್, 'ನಿಮ್ಮನ್ನ ಭಾರತಕ್ಕೆ ಕರೆದೊಯ್ಯಲು ಬಯುಸುತ್ತೇನೆ. ಅದು ನಿಮ್ಮ ಕೊನೆಯ ಸರಣಿಯಾಗಿರಬಹುದು' ಎಂದು ಉತ್ತರಿಸಿದರು.
ಈ ಎಲ್ಲ ಘಟನೆಗಳು ಬಿಸಿ ಬಿಸಿ ವಾತಾವರಣಕ್ಕೆ ಕಾರಣವಾಯಿತು. ಕೊನೆಗೂ ಪಂದ್ಯ ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿರುವ ಟೀಮ್ ಇಂಡಿಯಾ ಅಂತಿಮ ಮಂದಹಾಸ ಬೀರುವಲ್ಲಿ ಯಶಸ್ವಿಯಾಗಿದೆ.
ಏತನ್ಮಧ್ಯೆ ಪಂದ್ಯದ ಬಳಿಕ ರವಿಚಂದ್ರನ್ ಅಶ್ವಿನ್ ಅವರನ್ನು ಅಭಿನಂದಿಸಲು ಟೀಮ್ ಪೇನ್ ಮರೆಯಲಿಲ್ಲ. ಈ ಮೂಲಕ ಮೈದಾನದಲ್ಲಿ ಒರಟುತನದಿಂದ ವರ್ತಿಸಿದ ಪೇನ್, ಪಂದ್ಯ ಮುಗಿದ ಬಳಿಕ ಕ್ರೀಡಾಸ್ಫೂರ್ತಿಯನ್ನು ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.