ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರಿಗೆ ಎದುರಾಗಿರುವ ಜನಾಂಗೀಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪಾದಿತ ಆರು ಮಂದಿ ಪ್ರೇಕ್ಷಕರನ್ನು ಮೈದಾನದಿಂದ ಹೊರ ಹಾಕಲಾಗಿದೆ.
ಪ್ರಸ್ತುತ ಪ್ರಕರಣವನ್ನು ಮಾಜಿ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ ಹಾಗೂ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಪ್ರಮುಖರು ಖಂಡಿಸಿದ್ದಾರೆ.
ನಾಲ್ಕನೇ ದಿನದಾಟದಲ್ಲೂ ಭೋಜನ ವಿರಾಮಕ್ಕೆ ಕೆಲವೇ ಕ್ಷಣಗಳಿರುವಾಗ ಮೊಹಮ್ಮದ್ ಸಿರಾಜ್‌ಗೆ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರ ಗುಂಪಿನಿಂದ ಜನಾಂಗೀಯ ನಿಂದನೆ ಎದುರಾಗಿತ್ತು. ತಕ್ಷಣ ನಾಯಕ ಅಜಿಂಕ್ಯ ರಹಾನೆ ಗಮನಕ್ಕೆ ತಂದ ಸಿರಾಜ್, ಅಂಪೈರ್ ಬಳಿ ದೂರು ದಾಖಲಿಸಿದರು. ಬಳಿಕ ಎಚ್ಚೆತ್ತುಕೊಂಡ ಅಂಪೈರ್ ಸುದೀರ್ಘ ಮಾತುಕತೆಯ ಬಳಿಕ, ಭದ್ರತಾ ಸಿಬ್ಬಂದಿಗಳ ಸಹಾಯದಿಂದ ಆಪಾದಿತ ಆರು ಮಂದಿ ಪ್ರೇಕ್ಷಕರನ್ನು ಮೈದಾನದಿಂದ ಹೊರ ಹಾಕಿದರು.
ಕಳೆದ ದಿನವಷ್ಟೇ ಭಾರತೀಯ ಆಟಗಾರರಾದ ಮೊಹಮ್ಮದ್ ಸಿರಾಜ್ ಹಾಗೂ ಜಸ್‌ಪ್ರೀತ್ ಬೂಮ್ರಾಗೆ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಎದುರಾಗಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತ ದೂರು ದಾಖಲಿಸಿತ್ತು.
ಪ್ರಕರಣದ ಗಂಭೀರತೆಯನ್ನು ಅರಿತುಕೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಭಾನುವಾರದಂದು ಭಾರತ ಕ್ರಕೆಟ್ ತಂಡದ ಕ್ಷಮೆಯಾಚನೆಯನ್ನು ಕೋರಿದೆ. ಅಲ್ಲದೆ ಘಟನೆ ಬಗ್ಗೆ ಐಸಿಸಿ ತನಿಖೆಯನ್ನು ನಡೆಸಲಿದೆ.
ಈ ಘಟನೆಯನ್ನು ಖಂಡಿಸಿರುವ ವೀರೇಂದ್ರ ಸೆಹ್ವಾಗ್, ನೀವು ಮಾಡಿದರೆ ಕೆಣಕಿದ ಮಾತು ಆದರೆ ಬೇರೊಬ್ಬರು ಮಾಡಿದರೆ ಜನಾಂಗೀಯ ನಿಂದನೆ. ಎಸ್‌ಸಿಜಿಯಲ್ಲಿ ಆಸ್ಟ್ರೇಲಿಯಾದ ಕೆಲವು ಪ್ರೇಕ್ಷಕರ ವರ್ತನೆ ದುರದೃಷ್ಟಕರವಾಗಿದ್ದು, ಟೆಸ್ಟ್ ಸರಣಿಯ ಉತ್ತಮ ವಾತಾವರಣವನ್ನು ಕೆಡಿಸುತ್ತಿದೆ ಎಂದು ಹೇಳಿದರು.
ಭಾರತದ ಮಾಜಿ ಕಲಾತ್ಮಕಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಕೂಡಾ ಘಟನೆಯನ್ನು ಖಂಡಿಸಿದರು. ಎಸ್‌ಸಿಜಿ ದೃಶ್ಯಗಳು ತುಂಬಾ ದುರದೃಷ್ಟಕರ. ಈ ಅಸಂಬಂದ್ಧಕ್ಕೆ ಅಲ್ಲಿ ಯಾವುದೇ ಸ್ಥಾನವಿಲ್ಲ. ಕ್ರೀಡಾ ಮೈದಾನದಲ್ಲಿ ಆಟಗಾರರನ್ನು ನಿಂದಿಸುವ ಅವಶ್ಯಕತೆಯಾದರೂ ಎಂದಿಗೂ ಅರ್ಥವಾಗುತ್ತಿಲ್ಲ. ನೀವು ಆಟವನ್ನು ವೀಕ್ಷಿಸಲು ಬಂದಿಲ್ಲದಿದ್ದರೆ ಮತ್ತು ಗೌರವಿಸಲು ಸಾಧ್ಯವಾಗದಿದ್ದರೆ ದಯವಿಟ್ಟು ಉತ್ತಮ ವಾತಾವರಣವನ್ನು ಹಾಳು ಮಾಡಬೇಡಿ ಎಂದು ಹೇಳಿದರು.
ಕ್ರಿಕೆಟ್ ಅಭಿಮಾನಿಗಳು ಸಹ ಜನಾಂಗೀಯ ನಿಂದನೆ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಸಾನಿಧ್ಯವನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿಕೆಲವು ಅಭಿಮಾನಿಗಳು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.