ದೆಹಲಿ: ಮೊಹಮ್ಮದ್ ಶಮಿ (60ಕ್ಕೆ 4), ರವಿಚಂದ್ರನ್ ಅಶ್ವಿನ್ (57ಕ್ಕೆ 3) ಹಾಗೂ ರವೀಂದ್ರ ಜಡೇಜ ( 68ಕ್ಕೆ 3) ದಾಳಿಗೆ ತತ್ತರಿಸಿರುವ ಆಸ್ಟ್ರೇಲಿಯಾ, ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನದಾಟದಲ್ಲೇ 78.4 ಓವರ್‌ಗಳಲ್ಲಿ 263 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಬಳಿಕ ಬ್ಯಾಟಿಂಗ್ ಆರಂಭಿಸಿರುವ ಟೀಮ್ ಇಂಡಿಯಾ, ಮೊದಲ ದಿನದ ಅಂತ್ಯಕ್ಕೆ 9 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ (13*) ಹಾಗೂ ಕೆ.ಎಲ್. ರಾಹುಲ್ (4*) ಕ್ರೀಸಿನಲ್ಲಿದ್ದಾರೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾದ ಡೇವಿಡ್ ವಾರ್ನರ್ (15) ಹಾಗೂ ಉಸ್ಮಾನ್ ಖ್ವಾಜಾ ಮೊದಲ ವಿಕೆಟ್‌ಗೆ 50 ರನ್‌ಗಳ ಜೊತೆಯಾಟ ಕಟ್ಟಿದರು.
ಈ ಜೋಡಿಯನ್ನು ಶಮಿ ಬೇರ್ಪಡಿಸಿದರು. ಬಳಿಕ ಒಂದೇ ಓವರ್‌ನಲ್ಲಿ ಮಾರ್ನಸ್ ಲಾಬುಷೇನ್ (18) ಹಾಗೂ ಸ್ಟೀವ್ ಸ್ಮಿತ್ (0) ವಿಕೆಟ್ ಕಬಳಿಸಿದ ಅಶ್ವಿನ್, ಪ್ರವಾಸಿಗರಿಗೆ ಆಘಾತ ನೀಡಿದರು.
12 ರನ್ ಗಳಿಸಿದ ಟ್ರಾವಿಸ್ ಹೆಡ್ ಅವರನ್ನು ವೇಗಿ ಶಮಿ ಹೊರದಬ್ಬಿದರು. ಇನ್ನೊಂದೆಡೆ ದಿಟ್ಟ ಹೋರಾಟ ತೋರಿದ ಖ್ವಾಜಾ (81) ಸಮಯೋಚಿತ ಅರ್ಧಶತಕ ಗಳಿಸಿದರು. ಆದರೆ ಶತಕದ ಅಂಚಿನಲ್ಲಿ ಸ್ಪಿನ್ನರ್ ಜಡೇಜ ಬಲೆಗೆ ಬಿದ್ದರು.
ಕೆಳ ಕ್ರಮಾಂಕದಲ್ಲಿ ಪೀಟರ್ ಹ್ಯಾಂಡ್ಸ್‌ಕಂಬ್ ಅಜೇಯ ಅರ್ಧಶತಕ ಗಳಿಸಿ ತಂಡವನ್ನು 250ರ ಗಡಿ ದಾಟಿಸುವಲ್ಲಿ ನೆರವಾದರು. ಅವರಿಗೆ ನಾಯಕ ಪ್ಯಾಟ್ ಕಮಿನ್ಸ್ (33) ಸಾಥ್ ನೀಡಿದರು.
142 ಎಸೆತಗಳನ್ನು ಎದುರಿಸಿದ ಹ್ಯಾಂಡ್ಸ್‌ಕಾಂಬ್ ಒಂಬತ್ತು ಬೌಂಡರಿಗಳ ನೆರವಿನಿಂದ 72 ರನ್ ಗಳಿಸಿ ಔಟಾಗದೆ ಉಳಿದರು. ಇನ್ನುಳಿದಂತೆ ಅಲೆಕ್ಸ್ ಕ್ಯಾರಿ (0), ಟಾಡ್ ಮರ್ಫಿ (0), ನೇಥನ್ ಲಯನ್ (10) ಹಾಗೂ ಮ್ಯಾಥ್ಯೂ ಕೂಮನ್ (6) ನಿರಾಸೆ ಮೂಡಿಸಿದರು.
ಭಾರತದ ಪರ ಮೊಹಮ್ಮದ್ ಶಮಿ ನಾಲ್ಕು ಮತ್ತು ಅಶ್ವಿನ್ ಹಾಗೂ ಜಡೇಜ ತಲಾ ಮೂರು ವಿಕೆಟ್ ಕಬಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.