ADVERTISEMENT

ಭಾರತ 140 ರನ್‌ಗಳಿಗೆ ಸರ್ವ ಪತನ; ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ಸಮಬಲ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 4:34 IST
Last Updated 18 ಡಿಸೆಂಬರ್ 2018, 4:34 IST
   

ಪರ್ತ್‌:ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದೆ. ಈ ಮೂಲಕ ಟೆಸ್ಟ್‌ ಸರಣಿ 1–1ರಿಂದ ಸಮಗೊಂಡಿದೆ.

ಗೆಲುವಿಗೆ 287ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಸೋಮವಾರದ ಅಂತ್ಯಕ್ಕೆ 41 ಓವರ್‌ಗಳಲ್ಲಿ 5 ವಿಕೆಟ್‌ಗೆ 112ರನ್‌ ಕಲೆಹಾಕಿತ್ತು. ಮಂಗಳವಾರ 38 ರನ್‌ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಎರಡನೇ ಟೆಸ್ಟ್‌ ಸೋಲಿನಲ್ಲಿ ಅಂತ್ಯ ಕಂಡಿತು. ಭಾರತ ಇಡೀ ದಿನ ಆಟ ಮುಂದುವರಿಸಿದ್ದರೆ ಡ್ರಾ ಮಾಡಿಕೊಳ್ಳುವ ಅವಕಾಶವೂ ಇತ್ತು.

ವಿರಾಟ್‌ ಕೊಹ್ಲಿ ಬಳಗದ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಆಸ್ಟ್ರೇಲಿಯಾ 146 ರನ್‌ಗಳ ಗೆಲುವು ಸಾಧಿಸಿತು. ಭಾರತದ ಪರ ಇಂದು ಆಟ ಮುಂದುವರಿಸಿದ ಹನುಮ ವಿಹಾರಿ ಮತ್ತು ರಿಷಬ್‌ ಪಂತ್‌ ಜತೆಯಾಟದ ಮೇಲಿನ ವಿಶ್ವಾಸ ಕೆಲ ಸಮಯದಲ್ಲಿಯೇ ಕರಗಿತು. 28 ರನ್‌ ಗಳಿಸಿದ್ದ ಹನುಮ ವಿಹಾರಿ ಮಿಷೆಲ್‌ ಸ್ಟಾರ್ಕ್‌ಗೆ ವಿಕೆಟ್‌ ಒಪ್ಪಿಸಿದರು. ಆಸ್ಟ್ರೇಲಿಯಾ ಬೌಲರ್‌ಗಳಿಗೆ ರಿಷಬ್‌(30) ಸವಾಲಾಗಿ ಆಡಿದರಾದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ನೇಥನ್‌ ಲಯನ್‌ ಮತ್ತು ಸ್ಟಾರ್ಕ್‌ ಮುಂದಿನ ಮೂರು ವಿಕೆಟ್‌ಗಳನ್ನು ಬಹುಬೇಗ ಕಬಳಿಸಿದರು.

ADVERTISEMENT

ಉಮೇಶ್‌ ಯಾದವ್‌(2), ಇಶಾಂತ್‌ ಶರ್ಮಾ(0) ಮತ್ತು ಜಸ್‌ಪ್ರೀತ್‌ ಬೂಮ್ರಾ(0) ಪೆವಿನಿಯನ್‌ ಹಾದಿ ಹಿಡಿಯುವುದರೊಂದಿಗೆ ಭಾರತ ತಂಡದ ಹೋರಾಟ ಅಂತ್ಯ ಕಂಡಿತು.

ಡಿಸೆಂಬರ್‌ 26ರಿಂದ ಮೆಲ್ಬೋರ್ನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮುಂದಿನ ಟೆಸ್ಟ್‌ ಪಂದ್ಯ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.