ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ 469 ರನ್ ಗಳಿಸಿ ಆಲೌಟ್ ಆಗಿದೆ.
ಇಲ್ಲಿನ 'ದ ಒವಲ್' ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಕೇವಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 327 ರನ್ ಕಲೆಹಾಕಿತ್ತು.
ಮೊದಲ ದಿನವೇ ದ್ವಿಶಕತಕ ಜೊತೆಯಾಟವಾಡಿದ್ದ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದ ಇನಿಂಗ್ಸ್‌ಗೆ ಬಲ ತುಂಬಿದ್ದರು. ಇದರೊಂದಿಗೆ ಮೊದಲ ದಿನ ಮೇಲುಗೈ ಸಾಧಿಸಿದ್ದ ಪ್ಯಾಟ್ ಕಮಿನ್ಸ್ ಪಡೆಗೆ ಭಾರತದ ಬೌಲರ್‌ಗಳು ಇಂದು ತಿರುಗೇಟು ನೀಡಿದರು. ಎರಡನೇ ದಿನ 142 ರನ್ ಬಿಟ್ಟುಕೊಟ್ಟು ಉಳಿದ 7 ವಿಕೆಟ್‌ಗಳನ್ನು ಕಬಳಿಸಿದರು.
ಹೆಡ್ 163 ರನ್ ಹಾಗೂ ಸ್ಮಿತ್ 121 ರನ್ ಗಳಿಸಿ ಔಟಾದರು. ಇವರಿಬ್ಬರು 4ನೇ ವಿಕೆಟ್ ಪಾಲುದಾರಿಕೆಯಲ್ಲಿ 285 ರನ್ ಕೂಡಿಸಿದರು. ಉಳಿದಂತೆ ಮೊದಲ ದಿನ ಔಟಾದ ಡೇವಿಡ್ ವಾರ್ನರ್ (43) ಹಾಗೂ ಇಂದು ಕೊನೇ ಹಂತದಲ್ಲಿ ಹೋರಾಟ ನಡೆಸಿದ ಅಲೆಕ್ಸ್ ಕಾರಿ (48) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಎರಡಂಕಿ ಮೊತ್ತವನ್ನೂ ತಲುಪಲಿಲ್ಲ.
ಭಾರತ ಪರ ವೇಗಿ ಮೊಹಮ್ಮದ್ ಸಿರಾಜ್ 4 ವಿಕೆಟ್ ಉರುಳಿಸಿದರೆ, ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ತಲಾ 2 ವಿಕೆಟ್ ಕಿತ್ತರು. ಒಂದು ವಿಕೆಟ್ ರವೀಂದ್ರ ಜಡೇಜ ಪಾಲಾದರೆ, ಇನ್ನೊಂದು ವಿಕೆಟ್ ರನೌಟ್ ಮೂಲಕ ಬಂತು.
ಆಸ್ಟ್ರೇಲಿಯಾ ಗಳಿಸಿರುವ ಉತ್ತಮ ಮೊತ್ತದೆದುರು ಇನಿಂಗ್ಸ್ ಆರಂಭಿಸಿರುವ ಭಾರತ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದೆ.
ನಾಯಕ ರೋಹಿತ್ ಶರ್ಮಾ (15) ಮತ್ತು ಯುವ ಬ್ಯಾಟರ್ ಶುಭಮನ್ ಗಿಲ್ (6) ಕ್ರೀಸ್‌ನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.