ADVERTISEMENT

ವಿರಾಟ್‌ ಬಳಗದ ಕಣ್ಣು ಕುಕ್ಕಿದ ಪಿಂಕ್ ಬಾಲ್ ಹೊಳಪು!

ಗಿರೀಶದೊಡ್ಡಮನಿ
Published 19 ಡಿಸೆಂಬರ್ 2020, 8:30 IST
Last Updated 19 ಡಿಸೆಂಬರ್ 2020, 8:30 IST
ಟಿಮ್ ಪೇನ್ ಹಾಗೂ ವಿರಾಟ್ ಕೊಹ್ಲಿ
ಟಿಮ್ ಪೇನ್ ಹಾಗೂ ವಿರಾಟ್ ಕೊಹ್ಲಿ   

4,9,2,0,4,0,8,4,0,4,1

ಇದು ಯಾರದ್ದೋ ದೂರವಾಣಿ ಸಂಖ್ಯೆಯಲ್ಲ. ಶನಿವಾರ ಅಡಿಲೇಡ್ ಓವಲ್‌ ಕ್ರೀಡಾಂಗಣದಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಗಳಿಸಿದ ವೈಯಕ್ತಿಕ ಸ್ಕೋರ್‌ಗಳು.

11 ಬ್ಯಾಟ್ಸ್‌ಮನ್‌ಗಳು ಸೇರಿಸಿದ 36 ರನ್‌ಗಳು ಭಾರತವು ಟೆಸ್ಟ್‌ ಇತಿಹಾಸದಲ್ಲಿಯೇ ಗಳಿಸಿದ ಕನಿಷ್ಠ ಮೊತ್ತವಾಗಿ ದಾಖಲಾಯಿತು. ಆಸ್ಟ್ರೇಲಿಯಾ ಎದುರಿನ ಪಿಂಕ್‌ ಬಾಲ್ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಬಳಗ ಮಾಡಿದ ಸಾಧನೆ ಇದು.

ADVERTISEMENT

ಪಂದ್ಯದ ಎರಡನೇ ದಿನ ಆರ್. ಅಶ್ವಿನ್, ಜಸ್‌ಪ್ರೀತ್ ಬೂಮ್ರಾ ಮತ್ತು ಉಮೇಶ್ ಯಾದವ್ ಅವರ ಅಮೋಘ ಬೌಲಿಂಗ್‌ನಿಂದ ಪುಟಿದೆದ್ದಿದ್ದ ಭಾರತ ತಂಡವು ಮೂರನೇ ದಿನ ಊಟದ ವಿರಾಮಕ್ಕೆ ಇನ್ನೂ ಅರ್ಧ ಗಂಟೆ ಬಾಕಿಯಿರುವಾಗಲೇ ಬರಸಿಡಿಲು ಬಡಿಯಿತು. ಜೋಶ್ ಹ್ಯಾಜಲ್‌ವುಡ್ ಮತ್ತು ಪ್ಯಾಟ್ ಕಮಿನ್ಸ್‌ ಅವರ ’ಬೌಲಿಂಗ್ ಪಾಲುದಾರಿಕೆ‘ ಆಟವು ವಿರಾಟ್ ಪಡೆಯನ್ನು ಮಣ್ಣುಮುಕ್ಕಿಸಿತು.

36 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂತಹದೊಂದು ಹೀನಾಯ ಬ್ಯಾಟಿಂಗ್ ಅನ್ನು ತಂಡವು ಪ್ರದರ್ಶಿಸಿದೆ. 1974ರಲ್ಲಿ ಇಂಗ್ಲೆಂಡ್ ಎದುರು ಲಾರ್ಡ್ಸ್‌ನಲ್ಲಿ ಗಳಿಸಿದ್ದ 42 ರನ್‌ಗಳು ಇಲ್ಲಿಯವರೆಗಿನ ಕನಿಷ್ಠ ಮೊತ್ತವಾಗಿತ್ತು. ಆಸ್ಟ್ರೇಲಿಯಾ ಎದುರು ಬ್ರಿಸ್ಬೆನ್‌ನಲ್ಲಿ 1947ರಲ್ಲಿ ನಡೆದಿದ್ದ ಪಂದ್ಯದಲ್ಲಿ 58 ರನ್, ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಎದುರು 1952ರಲ್ಲಿ ಗಳಿಸಿದ್ದ 58 ರನ್. 1996ರಲ್ಲಿ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು 66 ರನ್ ಮತ್ತು 1948ರಲ್ಲಿ ಆಸ್ಟ್ರೇಲಿಯಾ ಎದುರು ಮೆಲ್ಬರ್ನ್‌ನಲ್ಲಿ 67 ರನ್‌ ಗಳಿಸಿದ್ದ ಭಾರತ ಇವತ್ತು ಅದೆಲ್ಲವನ್ನೂ ಮೀರಿದ ಕಳಂಕವನ್ನು ತನ್ನ ಹೆಸರಿಗೆ ಬಳಿದುಕೊಂಡಿದೆ.

ಎರಡು ದಿನಗಳ ಹಿಂದಷ್ಟೇ ಅಮೋಘ ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ ಕೂಡ ಈ ಇನಿಂಗ್ಸ್‌ನಲ್ಲಿ ಚೆಂಡಿನ ಹೊಳಪು ಮತ್ತು ಚಲನೆಯನ್ನು ಗುರುತಿಸುವಲ್ಲಿ ವಿಫಲರಾಗಿದ್ದು ಸೋಜಿಗ. ಟೆಸ್ಟ್ ಪರಿಣತ ಚೇತೇಶ್ವರ್ ಪೂಜಾರ, ಹನುಮವಿಹಾರಿ ಮತ್ತು ಮಯಂಕ್ ಅಗರವಾಲ್ ಅವರಂತಹವರಿಗೂ ಆಸ್ಟ್ರೇಲಿಯಾ ವೇಗಿಗಳ ಎಸೆತಗಳ ವಿರುದ್ಧ ಆಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಮೂರನೇ ದಿನ ಮೈದಾನದಲ್ಲಿ ಹೊನಲು ಬೆಳಕು ಚೆಲ್ಲುವ ಮುನ್ನವೇ ಭಾರತ ತಂಡದ ಮೇಲೆ ಸೋಲಿನ ಕರಿನೆರಳು ಆವರಿಸಿತು.

ಇನ್ನು ವಿರಾಟ್ ಕೊಹ್ಲಿ ಈ ವರ್ಷವನ್ನು ಒಂದು ಶತಕವಿಲ್ಲದೇ ಮುಗಿಸಬೇಕಾಯಿತು. ಅವರು ಈ ಪಂದ್ಯದ ನಂತರ ಭಾರತಕ್ಕೆ ಮರಳುತ್ತಿದ್ದಾರೆ. ಅವರ ಪಿತೃತ್ವ ರಜೆಯ ಔಚಿತ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಿಟ್ಟಿಗೆದ್ದು, ಟೀಕೆಗಳ ಮಳೆ ಸುರಿಸುತ್ತಿದ್ದಾರೆ.

ಸಚಿನ್ ತೆಂಡೂಲ್ಕರ್ ತಮ್ಮ ತಂದೆಯ ಮರಣದ ಮಾರನೇ ದಿನವೇ ವಿಶ್ವಕಪ್ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಮಹೇಂದ್ರಸಿಂಗ್ ಧೋನಿ ತಮ್ಮ ಮಗಳು ಜನಿಸಿದಾಗ ವಿಶ್ವಕಪ್ ಪಂದ್ಯದಲ್ಲಿ ಆಡುತ್ತಿದ್ದರು. ಆದರೆ ವಿರಾಟ್, ಯಾವುದೇ ಬೆಲೆ ತೆತ್ತಾದರೂ ತಮ್ಮ ಚೊಚ್ಚಲ ಮಗುವಿನ ಜನನದ ಸಂದರ್ಭದಲ್ಲಿ ಪತ್ನಿಯೊಂದಿಗೆ ಇರಲು ಹೋಗುವುದಾಗಿ ಈಚೆಗೆ ಹೇಳಿದ್ದರು. ಇದು ಕ್ರಿಕೆಟ್‌ಪ್ರೇಮಿಗಳನ್ನು ಕೆರಳಿಸಿದೆ. ಈ ಸೋಲಿನ ಹೊಣೆಯನ್ನು ತಾವೇ ಹೊತ್ತು ಮುಂದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಬೇಕು. ರೋಹಿತ್ ಶರ್ಮಾ ಕೂಡ ಮುಂದಿನ ಪಂದ್ಯದಲ್ಲಿ ಆಡುವುದು ಖಚಿತವಿಲ್ಲ. ಆಲ್‌ರೌಂಡರ್ ರವಿಂದ್ರ ಜಡೇಜ ಮರಳಬಹುದು. ಇದೀಗ ಮೊಹಮ್ಮದ್ ಶಮಿ ಕೂಡ ಗಾಯಗೊಂಡಿದ್ದು ಬೌಲಿಂಗ್‌ ವಿಭಾಗವನ್ನು ಸಮತೋಲನಗೊಳಿಸುವ ಸವಾಲು ತಂಡಕ್ಕಿದೆ.

ಅದೇನೆ ಇರಲಿ; ಈ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದ ವೈಫಲ್ಯ ಎದ್ದು ಕಾಣುತ್ತಿದೆ. ಮೊದಲ ಇನಿಂಗ್ಸ್‌ನಲ್ಲಿ ವಿರಾಟ್, ಅಜಿಂಕ್ಯ ಮತ್ತು ಪೂಜಾರ ಅವರನ್ನು ಬಿಟ್ಟರೆ ಉಳಿದವರಿಂದ ದಿಟ್ಟ ಹೋರಾಟ ಕಂಡುಬರಲಿಲ್ಲ. ಅದರಲ್ಲಿಯೂ ಆರಂಭಿಕ ಜೋಡಿಯ ವೈಫಲ್ಯ ಮಹತ್ವದ್ದು. ಉತ್ತಮ ಆರಂಭ ಸಿಗದಿದ್ದರೆ ಇನಿಂಗ್ಸ್‌ ಕಟ್ಟುವುದು ಸುಲಭವಲ್ಲ. ಅದು ಬೌಲರ್‌ಗಳ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಪೃಥ್ವಿ ಶಾ ಅವರ ಆಯ್ಕೆಯೇ ಇಲ್ಲಿ ಪ್ರಶ್ನಾರ್ಹ. ಶುಭಮನ್ ಗಿಲ್ ಮತ್ತು ಇನ್‌ಫಾರ್ಮ್‌ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಅವರನ್ನು ಬಿಟ್ಟು ಲಯದಲ್ಲಿಲ್ಲದ ಪೃಥ್ವಿಗೆ ಅವಕಾಶ ನೀಡಿದ್ದು ಏಕೆ? ಪೃಥ್ವಿ ಫೀಲ್ಡಿಂಗ್‌ನಲ್ಲಿಯೂ ಕಳಪೆ ಆಟವಾಡಿದ್ದು ಕೂಡ ಈಗ ಚರ್ಚೆಯಾಗುತ್ತಿದೆ.

ಮಧ್ಯಮಕ್ರಮಾಂಕದಲ್ಲಿ ರವೀಂದ್ರ ಜಡೇಜ ಅನುಪಸ್ಥಿತಿ ಕಾಡಿದ್ದು ಸುಳ್ಳಲ್ಲ. ಆರ್. ಅಶ್ವಿನ್ ಬೌಲಿಂಗ್‌ನಲ್ಲಿ ತಮ್ಮ ಸಾಮರ್ಥ್ಯ ಮೆರೆದರು. ಆದರೆ ಬ್ಯಾಟಿಂಗ್‌ನಲ್ಲಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲಿಲ್ಲ ಎರಡನೇ ಇನಿಂಗ್ಸ್‌ನಲ್ಲಿ ರಾತ್ರಿ ಕಾವಲುಗಾರನಾಗಿ ಬಂದಿದ್ದ ಜಸ್‌ಪ್ರೀತ್ ಬೂಮ್ರಾ ಅವರೇ ಉಳಿದೆಲ್ಲ ಪರಿಣತ ಬ್ಯಾಟ್ಸ್‌ಮನ್‌ಗಳಿಗಿಂತ ಮೇಲು. ಏಕೆಂದರೆ, ಬಿರುಗಾಳಿ ವೇಗದ ಬೌಲಿಂಗ್‌ ನ 17 ಎಸೆತಗಳನ್ನು ದಿಟ್ಟತನದಿಂದ ಎದುರಿಸಿದರು. ಎರಡನೇ ದಿನ ಸಂಜೆ ವಿಕೆಟ್ ಪತನವಾಗದಂತೆ ತಡೆದರು.

ಟೆಸ್ಟ್ ಕ್ರಿಕೆಟ್ ತಾಳ್ಮೆಯ ಆಟ. ಮೊದಲ ಇನಿಂಗ್ಸ್‌ನಲ್ಲಿ ವಿರಾಟ್ ಮತ್ತು ರಹಾನೆ ಅದಕ್ಕೆ ತಕ್ಕಂತೆ ಆಡಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಚೆಂಡಿನ ಲಯವನ್ನು ಗುರುತಿಸಿ ಆಡಲು ಸಾಧ್ಯವಾಗದಿರಲು ತಾಳ್ಮೆಗೆಟ್ಟಿದ್ದೇ ಕಾರಣ. ಪಂದ್ಯ ಮುಗಿಯಲು ಇನ್ನೂ ಎರಡೂವರೆ ದಿನಗಳ ಸಮಯ ಇತ್ತು. ಯಾವ ಧಾವಂತವೂ ಇರಲಿಲ್ಲ. ಆದರೂ ವಿಕೆಟ್‌ಗಳನ್ನು ಚೆಲ್ಲಿದರು. ವಿದೇಶಿ ನೆಲದಲ್ಲಿ ಆಡಿದ ಮೊದಲ ಪಿಂಕ್‌ ಬಾಲ್ ಟೆಸ್ಟ್‌ ಭಾರತದ ಪಾಲಿಗೆ ಕರಾಳ ನೆನಪಾಗಿ ದಾಖಲೆ ಪುಟ ಸೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.