ADVERTISEMENT

ಟೆಸ್ಟ್ ಕ್ರಿಕೆಟ್‌ನಲ್ಲಿ 30ನೇ ಶತಕ ಸಿಡಿಸಿದ ಕೊಹ್ಲಿ; ಆಸಿಸ್‌ಗೆ 534 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2024, 9:44 IST
Last Updated 24 ನವೆಂಬರ್ 2024, 9:44 IST
<div class="paragraphs"><p>ಶತಕ ಸಿಡಿಸಿ ಸಂಭ್ರಮಿಸಿದ ವಿರಾಟ್ ಕೊಹ್ಲಿ</p></div>

ಶತಕ ಸಿಡಿಸಿ ಸಂಭ್ರಮಿಸಿದ ವಿರಾಟ್ ಕೊಹ್ಲಿ

   

ಚಿತ್ರ: X / @BCCI

ಪರ್ತ್‌: ಭಾರತ ಕ್ರಿಕೆಟ್‌ ತಂಡದ 'ರನ್‌ ಮಷಿನ್‌' ಖ್ಯಾತಿಯ ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದಾರೆ.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ ಕೇವಲ 5 ರನ್‌ ಗಳಿಸಿದ್ದ ಕೊಹ್ಲಿ, ಮಹತ್ವದ ಸಂದರ್ಭದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದಾರೆ. 143 ಎಸೆತಗಳನ್ನು ಎದುರಿಸಿದ ಅವರು 2 ಸಿಕ್ಸರ್ ಹಾಗೂ 8 ಬೌಂಡರಿ ಸಹಿತ ಅಜೇಯ 100 ರನ್‌ ಗಳಿಸಿದ್ದಾರೆ.

ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೊಹ್ಲಿ ಬಾರಿಸಿದ 30ನೇ ಶತಕ. ಇದರೊಂದಿಗೆ ಅವರು, ಬ್ಯಾಟಿಂಗ್ ದಂತಕತೆ ಡಾನ್‌ ಬ್ರಾಡ್ಮನ್‌ (29 ಶತಕ) ಅವರನ್ನು ಹಿಂದಿಕ್ಕಿದ್ದಾರೆ. ಜೊತೆಗೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿದ ಶತಕಗಳ ಸಂಖ್ಯೆಯನ್ನು 81ಕ್ಕೆ ಏರಿಸಿಕೊಂಡಿದ್ದಾರೆ. ಏಕದಿನ ಮಾದರಿಯಲ್ಲಿ 50 ಶತಕ ಸಿಡಿಸಿದ ಏಕೈಕ ಬ್ಯಾಟರ್‌ ಎಂಬ ಖ್ಯಾತಿ ಹೊಂದಿರುವ ಅವರು, ಟಿ20 ಮಾದರಿಯಲ್ಲಿ ಒಂದು ಬಾರಿ ಮೂರಂಕಿ ಗಳಿಸಿದ್ದಾರೆ.

ಕೊಹ್ಲಿ ನೂರು ರನ್‌ ಗಳಿಸುತ್ತಿದ್ದಂತೆ, ತಂಡದ ನಾಯಕ ಜಸ್‌ಪ್ರಿತ್‌ ಬೂಮ್ರಾ ಇನಿಂಗ್ಸ್‌ ಡಿಕ್ಲೇರ್‌ ಘೋಷಿಸಿ ಆತಿಥೇಯರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಭಾರತ ತಂಡದ ಮೊತ್ತ 6 ವಿಕೆಟ್‌ಗೆ 487 ರನ್‌ ಆಗಿದೆ. ಈ ಪಂದ್ಯ ಗೆಲ್ಲಲು ಕಾಂಗರೂ ಪಡೆ 534 ರನ್‌ ಗಳಿಸಬೇಕಿದೆ.

30ಕ್ಕಿಂತ ಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳು
ಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ 30ಕ್ಕಿಂತ ಹೆಚ್ಚು ಶತಕ ಸಿಡಿಸಿದ 17ನೇ ಬ್ಯಾಟರ್‌ ವಿರಾಟ್‌ ಕೊಹ್ಲಿ. ಈ ಮಾದರಿಯಲ್ಲಿ ಹೆಚ್ಚು ಶತಕ ಗಳಿಸಿದ ದಾಖಲೆ ಭಾರತದವರೇ ಆದ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಲ್ಲಿದೆ. ಅವರು 51 ಸಲ ಮೂರಂಕಿ ದಾಟಿದ್ದಾರೆ.

ದಕ್ಷಿಣ ಆಫ್ರಿಕಾದ ಜಾಕ್‌ ಕಾಲೀಸ್‌ (45), ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ (41), ಶ್ರೀಲಂಕಾದ ಕುಮಾರ ಸಂಗಕ್ಕಾರ (38), ಭಾರತದ ರಾಹುಲ್‌ ದ್ರಾವಿಡ್‌ (36), ಇಂಗ್ಲೆಂಡ್‌ನ ಜೋ ರೂಟ್‌ (35) ನಂತರದ ಸ್ಥಾನಗಳಲ್ಲಿ ಇದ್ದಾರೆ.

ಪಾಕಿಸ್ತಾನದ ಯೂನಿಸ್‌ ಖಾನ್‌, ಭಾರತದ ಸುನಿಲ್‌ ಗವಾಸ್ಕರ್‌, ವೆಸ್ಟ್‌ ಇಂಡೀಸ್‌ನ ಬ್ರಯಾನ್‌ ಲಾರಾ, ಲಂಕಾದ ಮಹೇಲ ಜಯವರ್ಧನೆ ತಲಾ 34 ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್‌ನ ಆಲಿಸ್ಟರ್ ಕುಕ್‌ 33, ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌, ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಮತ್ತು ಸ್ಟೀವ್‌ ವಾ ತಲಾ 32 ಸಲ ನೂರು ರನ್‌ ಗಳಿಸಿದ್ದಾರೆ. ಆಸಿಸ್‌ನ ಮ್ಯಾಥ್ಯೂ ಹೈಡನ್‌ ಮತ್ತು ವಿಂಡೀಸ್‌ ಬ್ಯಾಟರ್‌ ಶಿವನಾರಾಯಣ ಚಂದ್ರಪಾಲ್‌ ಸಹ 30 ಸಲ ಈ ಸಾಧನೆ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ 7ನೇ ನೂರು
ಆಸ್ಟ್ರೇಲಿಯಾದಲ್ಲಿ ಹೆಚ್ಚು ಶತಕ ಗಳಿಸಿದ ವಿದೇಶಿ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್‌, ಮೂರನೇ ಸ್ಥಾನಕ್ಕೇರಿದ್ದಾರೆ. ಇದು ಕಾಂಗರೂ ನಾಡಿನಲ್ಲಿ ಅವರು ಗಳಿಸಿದ 7ನೇ ಶತಕ. ದಕ್ಷಿಣ ಆಫ್ರಿಕಾದ ಜಾಕ್‌ ಕಾಲೀಸ್‌ (9) ಮಾತ್ರವೇ ಕೊಹ್ಲಿಗಿಂತ ಮುಂದಿದ್ದಾರೆ. ಇಂಗ್ಲೆಂಡ್‌ನ ವಲ್ಲಿ ಹ್ಯಾಮಂಡ್‌ ಸಹ ಕೊಹ್ಲಿಯಷ್ಟೇ ಶತಕ ಸಿಡಿಸಿದ್ದಾರೆ.

ಇಷ್ಟೇ ಅಲ್ಲ. ಭಾರತದ ಪರ ಯಾವುದೇ ವಿದೇಶಿ ನೆಲದಲ್ಲಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಚಿನ್‌ ಅವರೂ ಆಸ್ಟ್ರೇಲಿಯಾದಲ್ಲಿ 7 ಶತಕ ಬಾರಿಸಿದ್ದರು.

ಬಾ–ಗಾ ಟೂರ್ನಿಯಲ್ಲಿ ಹೆಚ್ಚು ಶತಕ
ಈ ಶತಕದ ಮೂಲಕ ಕೊಹ್ಲಿ, ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದ್ದ ಮತ್ತೊಂದು ದಾಖಲೆಯನ್ನು ಸರಿಗಟ್ಟಿದ್ದಾರೆ. ಇದುವರೆಗೆ, ಬಾರ್ಡರ್‌–ಗವಾಸ್ಕರ್‌ ಟೂರ್ನಿಯಲ್ಲಿ ಹೆಚ್ಚು ಶತಕ ಸಿಡಿಸಿದ ಶ್ರೇಯ ಸಚಿನ್‌ ಅವರದ್ದಾಗಿತ್ತು. ಇದೀಗ, ಆಸಿಸ್‌ ವಿರುದ್ಧದ ಶತಕ ಗಳಿಕೆಯನ್ನು 9ಕ್ಕೆ ಏರಿಸಿಕೊಂಡಿರುವ ಕೊಹ್ಲಿ, ಸಚಿನ್‌ ಜೊತೆ ದಾಖಲೆ ಹಂಚಿಕೊಂಡಿದ್ದಾರೆ.

ವರ್ಷದ ಬಳಿಕ ಶತಕ
ಕಳೆದ ವರ್ಷ ಜುಲೈನಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಡಾನ್‌ ಬ್ರಾಡ್ಮನ್‌ ದಾಖಲೆ ಸರಿಗಟ್ಟಿದ್ದ ಕೊಹ್ಲಿ, ಆ ನಂತರ 7 ಪಂದ್ಯಗಳಲ್ಲಿ ಆಡಿದರೂ ಮೂರಂಕಿ ರನ್‌ ಗಳಿಸಿರಲಿಲ್ಲ. ಹೀಗಾಗಿ ಪರ್ತ್‌ ಟೆಸ್ಟ್‌ನಲ್ಲಿ ದಾಖಲಾದ ಶತಕವು ಕಿಂಗ್‌ ಕೊಹ್ಲಿ ಪಾಲಿಗೆ ಶತಕದ ಬರವನ್ನು ನೀಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.