ನಾಗಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು 139.3 ಓವರ್‌ಗಳಲ್ಲಿ 400 ರನ್ನಿಗೆ ಆಲೌಟ್ ಆಗಿದೆ.
ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 223 ರನ್‌ಗಳ ಬೃಹತ್ ಮುನ್ನಡೆ ದಾಖಲಿಸಿದೆ.
ಎಂಟನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಅಕ್ಷರ್ ಪಟೇಲ್ ಅಮೋಘ ಆಟದ ನೆರವಿನಿಂದ ಮೂರನೇ ದಿನದಲ್ಲಿ ಭಾರತ 400 ರನ್‌ಗಳ ಗಡಿ ತಲುಪವಲ್ಲಿ ನೆರವಾಯಿತು.
ದಿನದ ಆರಂಭದಲ್ಲೇ ಅರ್ಧಶತಕ ಗಳಿಸಿದ ರವೀಂದ್ರ ಜಡೇಜ (70) ವಿಕೆಟ್ ನಷ್ಟವಾಯಿತು. ಆದರೆ ಮೊಹಮ್ಮದ್ ಶಮಿ (37) ಜೊತೆ ಸೇರಿದ ಅಕ್ಷರ್ ಆಸ್ಟ್ರೇಲಿಯಾ ಬೌಲರ್‌ಗಳನ್ನು ಕಾಡಿದರು.
ಊಟದ ವಿರಾಮಕ್ಕೆ ಕೆಲವೇ ಕ್ಷಣಗಳಿದ್ದಾಗ ಅಕ್ಷರ್ ವಿಕೆಟ್ ಒಪ್ಪಿಸಿದರು. ಈ ಮೂಲಕ ಚೊಚ್ಚಲ ಶತಕ ವಂಚಿತರಾದರು. 174 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ, ಒಂದು ಸಿಕ್ಸರ್‌ನಿಂದ 84 ರನ್ ಗಳಿಸಿದರು. ಇನ್ನುಳಿದಂತೆ ಸಿರಾಜ್ 1 ರನ್ ಗಳಿಸಿ ಔಟಾಗದೆ ಉಳಿದರು.
ಮರ್ಫಿಗೆ ಏಳು ವಿಕೆಟ್...
ಆಸ್ಟ್ರೇಲಿಯಾದ ಸ್ಪಿನ್ನರ್ ಟಾಡ್ ಮರ್ಫಿ ಚೊಚ್ಚಲ ಪಂದ್ಯದಲ್ಲೇ ಏಳು ವಿಕೆಟ್ ಸಾಧನೆ ಮಾಡಿದರು. ನಾಯಕ ಪ್ಯಾಟ್ ಕಮಿನ್ಸ್ ಎರಡು ಮತ್ತು ನೇಥನ್ ಲಯನ್ ಒಂದು ವಿಕೆಟ್ ಗಳಿಸಿದರು.
ರೋಹಿತ್ ಶತಕ...
ಭಾರತದ ಪರ ಎರಡನೇ ದಿನದಾಟದಲ್ಲಿ ನಾಯಕ ರೋಹಿತ್ ಶರ್ಮಾ (120) ಅಮೋಘ ಶತಕ ಗಳಿಸಿ ಮಿಂಚಿದರು.
ಈ ಮೊದಲು ಜಡೇಜ ದಾಳಿಗೆ (47ಕ್ಕೆ 5 ವಿಕೆಟ್) ತತ್ತರಿಸಿದ ಆಸ್ಟ್ರೇಲಿಯಾ, ಮೊದಲ ಇನ್ನಿಂಗ್ಸ್‌ನಲ್ಲಿ 177 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಅತಿಥೇಯರ ಪರ ಆರ್. ಅಶ್ವಿನ್ ಸಹ ಮೂರು ವಿಕೆಟ್ ಗಳಿಸಿದರು.
ಆಲ್‌ರೌಂಡರ್ ರವೀಂದ್ರ ಜಡೇಜ ಈ ಪಂದ್ಯದಲ್ಲಿ ಐದು ವಿಕೆಟ್ ಹಾಗೂ ಅರ್ಧಶತಕ ಸಾಧನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.