ADVERTISEMENT

147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಟ ದಾಖಲೆ ಬರೆದ ಅಶ್ವಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2024, 11:05 IST
Last Updated 20 ಸೆಪ್ಟೆಂಬರ್ 2024, 11:05 IST
<div class="paragraphs"><p>ಆರ್. ಅಶ್ವಿನ್</p></div>

ಆರ್. ಅಶ್ವಿನ್

   

(ಪಿಟಿಐ ಚಿತ್ರ)

ಚೆನ್ನೈ: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕದ ಸಾಧನೆ ಮಾಡಿರುವ ಭಾರತದ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್, 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದಾರೆ.

ADVERTISEMENT

ಟೆಸ್ಟ್ ಕ್ರಿಕೆಟ್‌ನಲ್ಲಿ 30ಕ್ಕೂ ಹೆಚ್ಚು ಸಲ ಐದು ವಿಕೆಟ್ ಸಾಧನೆ (ಇನಿಂಗ್ಸ್‌ವೊಂದರಲ್ಲಿ) ಮತ್ತು 20ಕ್ಕೂ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದ (ಶತಕ ಸೇರಿದಂತೆ) ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಅಶ್ವಿನ್ ಭಾಜನರಾಗಿದ್ದಾರೆ.

ತವರು ಅಂಗಣ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಶ್ವಿನ್ ಈ ಸ್ಮರಣೀಯ ಸಾಧನೆ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಈಗಾಗಲೇ 36 ಸಲ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಹಾಗೆಯೇ ಆರು ಶತಕ ಹಾಗೂ 14 ಅರ್ಧಶಕಗಳನ್ನು ಗಳಿಸಿದ್ದಾರೆ.

ಎಂಟು ಹಾಗೂ ಕೆಳಗಿನ ಕ್ರಮಾಂಕದಲ್ಲಿ 4ನೇ ಶತಕ ಸಾಧನೆ...

ಟೆಸ್ಟ್ ಕ್ರಿಕೆಟ್‌ನಲ್ಲಿ ಎಂಟು ಹಾಗೂ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಡೇನಿಯಲ್ ವೆಟೊರಿ (5 ಶತಕ) ನಂತರದ ಸ್ಥಾನದಲ್ಲಿ ಅಶ್ವಿನ್ ಗುರುತಿಸಿಕೊಂಡಿದ್ದಾರೆ.

ಆರ್. ಅಶ್ವಿನ್

ತವರು ಅಂಗಣದಲ್ಲಿ ಅಶ್ವಿನ್ ವಿಶಿಷ್ಟ ಸಾಧನೆ...

ಒಟ್ಟಾರೆಯಾಗಿ ಚೆಪಾಕ್ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಎರಡು ಶತಕ ಹಾಗೂ ನಾಲ್ಕು ಸಲ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಆ ಮೂಲಕ ಒಂದೇ ತಾಣದಲ್ಲಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಶತಕ ಹಾಗೂ ಐದು ವಿಕೆಟ್ ಸಾಧನೆ ಮಾಡಿರುವ ಗ್ಯಾರಿ ಸೋಬರ್ಸ್ (ಲೀಡ್ಸ್), ಇಯಾನ್ ಬಾಥಮ್ (ಲೀಡ್ಸ್), ಕಪಿಲ್ ದೇವ್ (ಚೆನ್ನೈ) ಮತ್ತು ಕ್ರಿಸ್ ಕ್ರೇನ್ಸ್ (ಆಕ್ಲೆಂಡ್) ಸೇರಿದ ದಿಗ್ಗಜರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಈ ಪೈಕಿ ಭಾರತದ ಮಾಜಿ ನಾಯಕ ಕಪಿಲ್ ದೇವ್, ಚೆನ್ನೈ ಮೈದಾನದಲ್ಲೇ ಎರಡು ಶತಕ ಹಾಗೂ ಎರಡು ಸಲ ಐದು ವಿಕೆಟ್ ಸಾಧನೆ ಮಾಡಿದ್ದರು.

ಧೋನಿ ದಾಖಲೆ ಸರಿಗಟ್ಟಿದ ಅಶ್ವಿನ್...

ಟೆಸ್ಟ್ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಆರು ಶತಕ ಗಳಿಸಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು 38 ವರ್ಷದ ಅಶ್ವಿನ್ ಸರಿಗಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆರನೇ ಶತಕ ಗಳಿಸಿದ ಅಶ್ವಿನ್ 133 ಎಸೆತಗಳಲ್ಲಿ 113 ರನ್ ಗಳಿಸಿ (11 ಬೌಂಡರಿ, 2 ಸಿಕ್ಸರ್) ಔಟ್ ಆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.