ಚೆನ್ನೈ: ಭಾರತ ಕ್ರಿಕೆಟ್ ತಂಡದ ಆಲ್‌ರೌಂಡ್ ಆಟಗಾರ ರವಿಚಂದ್ರನ್ ಅಶ್ವಿನ್, ತವರು ಅಂಗಣ ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಐದು ವಿಕೆಟ್ ಗೊಂಚಲು ಗಳಿಸಿದ್ದಾರೆ.
ಆ ಮೂಲಕ 38 ವರ್ಷದ ಅಶ್ವಿನ್ ಚೆನ್ನೈ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿದ್ದಾರೆ. ಅಶ್ವಿನ್ ಆಲ್‌ರೌಂಡ್ ಆಟದ ಬಲದಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 280 ರನ್ ಅಂತರದ ಗೆಲುವು ದಾಖಲಿಸಿದೆ. ಅಲ್ಲದೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಮೊದಲ ಇನಿಂಗ್ಸ್‌ನಲ್ಲಿ ಭಾರತ ಒಂದು ಹಂತದಲ್ಲಿ 144 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಎಂಟನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದಿದ್ದ ಅಶ್ವಿನ್, ರವೀಂದ್ರ ಜಡೇಜ ಅವರೊಂದಿಗೆ 199 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.
ಟೀಮ್ ಇಂಡಿಯಾ ಪರ ಆಪತ್ಬಾಂಧವ ಎನಿಸಿದ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಆರನೇ ಶತಕ (113) ಸಾಧನೆ ಮಾಡಿದರು. ಇದರೊಂದಿಗೆ ಭಾರತ ತಂಡವು ಉತ್ತಮ ಸ್ಥಿತಿಗೆ ತಲುಪಲು ನೆರವಾದರು.
ಬಳಿಕ ಪಂದ್ಯದ ನಾಲ್ಕನೇ ಇನಿಂಗ್ಸ್‌ನಲ್ಲಿ ಕೈಚಳಕ ತೋರಿರುವ ಅಶ್ವಿನ್, 88 ರನ್ ತೆತ್ತು ಆರು ವಿಕೆಟ್ ಗಳಿಸುವ ಮೂಲಕ ಎದುರಾಳಿ ತಂಡದ ಕುಸಿತಕ್ಕೆ ಕಾರಣರಾದರು.
ಒಂದೇ ಪಂದ್ಯದಲ್ಲಿ ಶತಕ ಹಾಗೂ ಐದು ವಿಕೆಟ್ ಸಾಧನೆ...
ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಒಂದೇ ಪಂದ್ಯದಲ್ಲಿ ನಾಲ್ಕನೇ ಸಲ ಶತಕ ಹಾಗೂ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ದಿಗ್ಗಜ ಇಯಾನ್ ಬಾಥಮ್ (5 ಸಲ) ನಂತರದ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.
ತವರು ಅಂಗಣದಲ್ಲಿ ವಿಶಿಷ್ಟ ಸಾಧನೆ...
ಒಂದೇ ಮೈದಾನದಲ್ಲಿ ಇದು ಎರಡನೇ ಬಾರಿಗೆ ಅಶ್ವಿನ್ ಶತಕ ಹಾಗೂ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ.
2021ರಲ್ಲಿ ಚೆನ್ನೈಯಲ್ಲೇ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲೂ ಅಶ್ವಿನ್ ಶತಕ (106) ಹಾಗೂ ಐದು ವಿಕೆಟ್ (43ಕ್ಕೆ 5 ವಿಕೆಟ್) ಗಳಿಸಿದ್ದರು.
ಶೇನ್ ವಾರ್ನ್ ದಾಖಲೆ ಸರಿಗಟ್ಟಿದ ಅಶ್ವಿನ್...
ಒಟ್ಟಾರೆಯಾಗಿ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 37ನೇ ಸಲ ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ (67) ಮುಂಚೂಣಿಯಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಸಾಧನೆ:
ಮುತ್ತಯ್ಯ ಮುರಳೀಧರನ್: 67 (133 ಟೆಸ್ಟ್)
ಆರ್. ಅಶ್ವಿನ್: 37 (101 ಟೆಸ್ಟ್)
ಶೇನ್ ವಾರ್ನ್: 37 (145 ಟೆಸ್ಟ್)
ರಿಚರ್ಡ್ ಹಾಡ್ಲಿ: 36 (86 ಟೆಸ್ಟ್)
ಅನಿಲ್ ಕುಂಬ್ಳೆ: 35 (132 ಟೆಸ್ಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.