ADVERTISEMENT

IND vs BAN 2nd Test: ಉಮೇಶ್, ಅಶ್ವಿನ್ ಮಿಂಚು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 22:32 IST
Last Updated 22 ಡಿಸೆಂಬರ್ 2022, 22:32 IST
ಭಾರತ ತಂಡದ ಉಮೇಶ್ ಯಾದವ್ ಸಂಭ್ರಮ –ಎಎಫ್‌ಪಿ ಚಿತ್ರ
ಭಾರತ ತಂಡದ ಉಮೇಶ್ ಯಾದವ್ ಸಂಭ್ರಮ –ಎಎಫ್‌ಪಿ ಚಿತ್ರ   

ಮೀರ್‌ಪುರ್: ವೇಗಿ ಉಮೇಶ್ ಯಾದವ್ ಮತ್ತು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ದಾಳಿಗೆ ಬಾಂಗ್ಲಾದೇಶ ತಂಡ ಕುಸಿಯಿತು.

ಗುರುವಾರ ಇಲ್ಲಿ ಆರಂಭವಾದ ಎರಡನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ 227 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಮೊಮಿನುಲ್ ಹಕ್ 157 ಎಸೆತಗಳಲ್ಲಿ 84 ರನ್‌ ಗಳಿಸಿ, ತಂಡದ ಗರಿಷ್ಠ ಸ್ಕೋರರ್ ಆದರು. ಉಮೇಶ್ (25ಕ್ಕೆ4) ಮತ್ತು ಆರ್. ಅಶ್ವಿನ್ (71ಕ್ಕೆ4) ಅವರ ದಾಳಿಯ ಮುಂದೆ ಆತಿಥೇಯ ತಂಡದ ಬ್ಯಾಟರ್‌ಗಳು ವಿಕೆಟ್ ಒಪ್ಪಿಸಿದರು.

12 ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಮರಳಿದ ಎಡಗೈ ಮಧ್ಯಮವೇಗಿ ಜೈದೇವ್ ಉನದ್ಕತ್ (50ಕ್ಕೆ2) ಖಾತೆ ತೆರೆದರು. 2010ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಆಡಿದ್ದರು. ಆಗಲೂ ವಿಕೆಟ್ ಗಳಿಸಿರಲಿಲ್ಲ. ಅದರ ನಂತರ ಅವರಿಗೆ ತಂಡದಲ್ಲಿ ಅವಕಾಶ ಲಭಿಸಿರಲಿಲ್ಲ. 31 ವರ್ಷದ ಜೈದೇವ್ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು.

ADVERTISEMENT

ಇನಿಂಗ್ಸ್ ಆರಂಭಿಸಿರುವ ಭಾರತ ತಂಡವು ದಿನದಾಟದ ಮುಕ್ತಾಯಕ್ಕೆ 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 19 ರನ್‌ ಗಳಿಸಿತು. ನಾಯಕ ಕೆ.ಎಲ್. ರಾಹುಲ್ (ಬ್ಯಾಟಿಂಗ್ 3) ಮತ್ತು ಶುಭಮನ್ ಗಿಲ್ (ಬ್ಯಾಟಿಂಗ್ 14) ಕ್ರೀಸ್‌ನಲ್ಲಿದ್ದಾರೆ.

ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ಸಿಗುತ್ತಿದೆ. ಬಾಂಗ್ಲಾ ಸ್ಪಿನ್ನರ್‌ಗಳ ಎಸೆತಗಳು ಹೆಚ್ಚು ತಿರುವು ಪಡೆದು ನುಗ್ಗುತ್ತಿವೆ. ಇದರಿಂದಾಗಿ ಭಾರತದ ಆರಂಭಿಕ ಜೋಡಿಯು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದೆ.

ಆದರೆ ಮೊದಲ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿ ಗೆಲುವಿನ ರೂವಾರಿಯಾಗಿದ್ದ ಕುಲದೀಪ್ ಯಾದವ್ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ. ಇದರಿಂದಾಗಿ ಎರಡನೇ ಇನಿಂಗ್ಸ್‌ನಲ್ಲಿ ಅವರ ಕೊರತೆ ಕಾಡಬಹುದು ಮತ್ತು ವಿವಾದದ ಬಿಸಿ ಹೆಚ್ಚಬಹುದು.

ಬೆಳಿಗ್ಗೆ ಪಿಚ್ ಮೇಲೆ ಕಣ್ಣು ಹಾಯಿಸಿದ್ದ ರಾಹುಲ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಮೂರನೇ ಮಧ್ಯಮವೇಗಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಬಾಂಗ್ಲಾದೇಶದ ದುರ್ಬಲ ಬ್ಯಾಟಿಂಗ್ ಪಡೆಯಿಂದಾಗಿ ಭಾರತದ ಬೌಲರ್‌ಗಳು ಯಶಸ್ಸು ಗಳಿಸಿದರು. ಅದರಲ್ಲೂ ಜೈದೇವ್ ಅವರು ಆರಂಭಿಕ ಬ್ಯಾಟರ್ ಝಾಕೀರ್ ಹಸನ್ ವಿಕೆಟ್ ಗಳಿಸುವುದರೊಂದಿಗೆ ಬಾಂಗ್ಲಾದ ಕುಸಿತ ಶುರುವಾಯಿತು. ಅವರು ಮುಷ್ಫಿಕುರ್ ಕರೀಮ್ ವಿಕೆಟ್ ಕೂಡ ಗಳಿಸಿ ಬಾಂಗ್ಲಾ ತಂಡದ ಸಂಕಷ್ಟ ಹೆಚ್ಚಿಸಿದರು. ಎರಡನೇ ಓವರ್‌ನಲ್ಲಿ ಹಸನ್‌ ಕ್ಯಾಚ್‌ ಕೈಚೆಲ್ಲಿದ್ದ ಸಿರಾಜ್ ಜೀವದಾನ ನೀಡಿದ್ದರು.

ಬೇಗನೆ ತನ್ನ ಬಣ್ಣ ಬದಲಿಸಿಕೊಳ್ಳುತ್ತಿದ್ದ ಪಿಚ್‌ ಮರ್ಮ ಅರಿತ ಅಶ್ವಿನ್ ಚಾಣಾಕ್ಷತನ ಮೇಲುಗೈ ಸಾಧಿಸಿತು. ನಜ್ಮುಲ್ ಹುಸೇನ್ ಶಾಂತೊ, ಲಿಟನ್ ದಾಸ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಈ ನಡುವೆ ಮೊಮಿನುಲ್ ಹಕ್ ಬ್ಯಾಟ್ ಬೀಸಿದರು.

ಅಶ್ವಿನ್ ಹಾಕಿದ 24ನೇ ಓವರ್‌ನಲ್ಲಿ ಅಶ್ವಿನ್ ಎಸೆತವು ಮೊಮಿನುಲ್ ಬ್ಯಾಟ್‌ ಸವರಿ ವಿಕೆಟ್‌ಕೀಪರ್ ಹಾಗೂ ಮೊದಲ ಸ್ಲಿಪ್ ಮಧ್ಯದಲ್ಲಿ ಸಾಗಿತ್ತು. ಪಂತ್ ಪ್ರಯತ್ನಿಸಿದರೂ ಹಿಡಿತಕ್ಕೆ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ 74ನೇ ಓವರ್‌ನಲ್ಲಿ ಅಶ್ವಿನ್ ಎಸೆತದಲ್ಲಿಯೇ ಅವರು ಪಂತ್‌ಗೆ ಕ್ಯಾಚಿತ್ತರು. ಉಮೇಶ್ ಮಧ್ಯಮ ಕ್ರಮಾಂಕದ ನಾಲ್ಕು ವಿಕೆಟ್‌ಗಳನ್ನು ತಮ್ಮ ಜೇಬಿಗಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.